ನವದೆಹಲಿ, ನ. 3 : ಕರ್ನಾಟಕ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಶೀಘ್ರದಲ್ಲಿ ಶಮನವಾಗಲಿದೆ. ನಾಯಕತ್ವ ಬದಲಾವಣೆ ಮಾಡುವುದು ಸಾಧ್ಯವೇ ಇಲ್ಲ ಎಂದು ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಕ್ವಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಕೂಡಾ ಇದೇ ಮಾತನ್ನು ಹೇಳಿದ್ದರು. ಈ ಮೂಲಕ ಹೈಕಮಾಂಡ್ ಸಮ್ಮುಖದಲ್ಲಿ ಶಮನಗೊಳ್ಳಬೇಕಿದ್ದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಂತಾಯಿತು.
ಈ ಮಧ್ಯೆ ಪ್ರಸಕ್ತ ವಿದ್ಯಮಾನದ ಬಗ್ಗೆ ಹೈಕಮಾಂಡ್ ಗೆ ವಿವರಿಸಲು ಇಂಧನ ಸಚಿವ ಕೆ ಎಸ್ ಈಶ್ವರಪ್ಪ, ವಕ್ತಾರ ಸಿಟಿ ರವಿ, ಶಾಸಕರಾದ ಆನೇಕಲ್ ನಾರಾಯಣಸ್ವಾಮಿ, ರಾಮದಾಸ್ ಮತ್ತು ಎಸ್ ರಘು ಅವರನ್ನೊಳಗೊಂಡ ನಿಯೋಗ ದೆಹಲಿಗೆ ತೆರಳಿತು. ಭಿನ್ನಮತ ಶಮನಗೊಳಿಸುವ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲಾಗುವುದು. ಸರಕಾರಕ್ಕೆ ಧಕ್ಕೆಯಾಗದ ಹಾಗೆ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರೊಂದಿಗೆ ಜನಾರ್ದನರೆಡ್ಡಿ ಇಂದು ನಡೆಸಿದ ಮಾತುಕತೆ ವಿಫಲವಾಗಿದ್ದು, ರೆಡ್ಡಿ ನಾಯಕತ್ವ ಬದಲಾಗಬೇಕು ಎಂಬ ಪಟ್ಟಿನಿಂದ ಹಿಂದೆ ಸರಿಯುತ್ತಿಲ್ಲ. ಸುಷ್ಮಾ ಸ್ವರಾಜ್ ನಮ್ಮ ತಾಯಿ ಇದ್ದ ಹಾಗೆ, ತಾಯಿ ಮಕ್ಕಳ ಬಯಕೆ ಈಡೇರಿಸುತ್ತಾರೆ ಎನ್ನುವ ನಂಬಿಕೆ ಇದೆ. ನಮ್ಮ ನಿಲುವು ಅಚಲ ಎಂದು ರೆಡ್ಡಿ ಹೇಳಿದರು.
(ಏಜನ್ಸೀಸ್)