{image-10-rajinikanth6.jpg thatskannada.oneindia.in}ಚೆನ್ನೈ, ಸೆ. 10 : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕನ್ನಡಿಗ ರಜಿನಿಕಾಂತ್ ಅವರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಯುವ ಕಾಂಗ್ರೆಸ್ ಕಾಂಗ್ರೆಸ್ ಸಂಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಪಕ್ಷ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ರಜಿನಿಕಾಂತ್ ಅವರಿಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಚೆನ್ನೈನಲ್ಲಿ ಗುರುವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಮತ್ತು ಡಿಎಂಕೆ ಮಧ್ಯೆ ಬಿರುಕು ಕಾಣಿಸಿಕೊಂಡಿದೆ ಎಂಬ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು. ತಮಿಳುನಾಡು ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಭೇಟಿ ಮಾಡದಿರುವುದು ಅನೇಕ ಉಹಾಪೋಹಗಳಿಗೆ ಕಾರಣವಾಗಿತ್ತು. ಕರುಣಾನಿಧಿ ಅವರ ಅಭಿಮಾನಿ ನಾನು, ಅವರು ರಾಜಕೀಯದಲ್ಲಿ ಅತ್ಯಂತ ಹಿರಿಯ ವ್ಯಕ್ತಿತ್ವ, ಅವರ ಬಗ್ಗೆ ಅಪಾರವಾದ ಗೌರವವಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್, ಡಿಎಂಕೆ ಸಂಬಂಧ ಗಟ್ಟಿಯಾಗಿದೆ ಇದರಲ್ಲಿ ಯಾವುದೇ ಸಂಶಯಬೇಡ. ಕೇಂದ್ರ ಸರಕಾರ ರಚನೆಯಲ್ಲಿ ಡಿಎಂಕೆ ಪಾತ್ರ ಬಹುದೊಡ್ಡದು ಎಂದರು. ಯುವ ಕಾಂಗ್ರೆಸ್ ಬಲವರ್ಧನೆಗೆ ಮೂರು ದಿನಗಳ ತಮಿಳುನಾಡು ಪ್ರವಾಸ ಕೈಗೊಳ್ಳಲಾಗಿದ್ದು, ಅನೇಕ ಯುವಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು. ತಮಿಳು ನಟ ವಿಜಯ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ರಜಿನಿಕಾಂತ್ ಅವರನ್ನು ಸೆಳೆಯಲು ಕಾಂಗ್ರೆಸ್ ಕಳೆದ ಅನೇಕ ವರ್ಷಗಳಿಂದ ಪ್ರಯತ್ನ ನಡೆಸಿದೆ.
(ಏಜನ್ಸೀಸ್)