(ವಿಶೇಷ ವರದಿ)
ಲಂಡನ್‌ನ ಬಿಗ್‌ಬೆನ್ ಬಿಟ್ಟರೆ ಈಗ ಬೆಂಗಳೂರೇ.. ಏನು! ಬಿಗ್‌ಬೆನ್‌ಗೂ ಬೆಂಗಳೂರಿಗೂ ಏನು ಸಂಬಂಧ ಅಂತೀರಾ? ಬಿಗ್‌ಬೆನ್‌ನಷ್ಟೇ ದೊಡ್ಡದಾದ ಬೃಹತ್ ಗಡಿಯಾರ ಬೆಂಗಳೂರಿನಲ್ಲಿ ಈ ಹೊತ್ತು ರಾರಾಜಿಸುತ್ತಿದೆ. ಸರ್ವಧರ್ಮ ಸಮನ್ವಯದ ಪ್ರತೀಕವಾಗಿರುವ ಈ ಗಡಿಯಾರ ವಿಶ್ವದ ಎರಡನೇ ಅತಿದೊಡ್ಡ ಗೋಪುರ ಗಡಿಯಾರ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
ಸದ್ಯಕ್ಕೆ ಇದು ಏಷ್ಯಾಖಂಡದಲ್ಲೇ ಅತ್ಯಂತ ದೊಡ್ಡ ಗೋಪುರ ಗಡಿಯಾರ. ಅಂದ ಹಾಗೆ ಇದು ಎಲ್ಲಿದೆ ಎಂದು ಹೇಳಲೇ ಇಲ್ಲವಲ್ಲ... ನಗರದ ಹೊರವಲಯದಲ್ಲಿರುವ ಓಂಕಾರಾಶ್ರಮದಲ್ಲಿ ಜ.30ರ ಬುಧವಾರ ಈ ಗೋಪುರ ಗಡಿಯಾರ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳುತ್ತಿದೆ.
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪುಷ್ಪಗಡಿಯಾರ ನಿರ್ಮಿಸಿದ ದೇಶದ ಪ್ರಖ್ಯಾತ ಕೈಗಡಿಯಾರ ಸಂಸ್ಥೆ ಎಚ್.ಎಂ.ಟಿ. ಮೂರು ವರ್ಷಗಳ ಸತತ ಪರಿಶ್ರಮದಿಂದ ಈ ಬೃಹತ್ ಗಡಿಯಾರ ನಿರ್ಮಿಸಿದೆ. ಓಂಕಾರಾಶ್ರಮದ ಸದ್ಗುರು ಶ್ರೀಶಿವಪುರಿ ಮಹಾಸ್ವಾಮಿಗಳ 54ನೇ ವರ್ಷದ ಜಯಂತಿ ಸಂದರ್ಭದಲ್ಲಿ ಈ ಗಡಿಯಾರವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಬಾಲಗಂಗಾಧರನಾಥ ಸ್ವಾಮಿಗಳು ಉದ್ಘಾಟಿಸುತ್ತಿದ್ದಾರೆ.
ಶಿವಪುರಿ ಸ್ವಾಮಿಗಳ ಕನಸಿನ ಕೂಸಾದ ಈ ಗಡಿಯಾರವನ್ನು 40 ಅಡಿ ಎತ್ತರದ ಬೃಹತ್ ಸ್ತಂಭಗಳ ಮೇಲೆ ನಿಲ್ಲಿಸಲಾಗಿದೆ. 20 ಟನ್ ಉಕ್ಕು, ಸಿಮೆಂಟ್ ಬಳಸಿ ನುರಿತ ತಜ್ಞರು ವಿಶೇಷ ವಿನ್ಯಾಸದಲ್ಲಿ ಈ ಗೋಪುರ ಗಡಿಯಾರವನ್ನು ಸಿದ್ಧಪಡಿಸಿದ್ದಾರೆ. ಗಡಿಯಾರದ ಎರಡೂ ಮುಳ್ಳುಗಳು ತಲಾ 40 ಕೆ.ಜಿ. ತೂಕ ಇವೆ.
24 ಅಡಿ ವ್ಯಾಸವಿರುವ ಈ ಕಡಿಯಾರದ ಪ್ರತಿಯಾಂದು ಅಂಕಿಗಳೂ ತಲಾ 2.5 ಅಡಿ ಎತ್ತರ ಇವೆ. ಟಾರ್ಕ್ ಸ್ಟೆಪ್ಪರ್ ಮೋಟಾರ್‌ಗಳನ್ನೊಳಗೊಂಡ ಸ್ವಯಂ ಚಾಲಿತವಾದ ಈ ಗಡಿಯಾರದ ನಿನಾದ ಸುತ್ತಮುತ್ತಲ ಮೂರು ಕಿ.ಮೀಟರ್ ವ್ಯಾಪ್ತಿಯವರೆಗೂ ಹಬ್ಬುತ್ತದೆ. ಗಂಟೆಗೊಮ್ಮೆ ಈ ಗಡಿಯಾರ ಶಂಖನಾದ, ಗಂಟಾನಾದ ಮಾಡುತ್ತದೆ. ಮುಳ್ಳಗಳ ಮಧ್ಯೆ ಓಂಕಾರಾಶ್ರಮದ ಸಂಕೇತವಾಗಿ ಓಂ ಅಕ್ಷರವಿದೆ. ಅತ್ಯಾಕರ್ಷಕ ವಿನ್ಯಾಸದಿಂದ ಕಂಗೊಳಿಸುತ್ತಿರುವ ಈ ಗಡಿಯಾರ ಮುಂದಿನ ದಿನಗಳಲ್ಲಿ ಇದು ಬೆಂಗಳೂರಿನ ಮತ್ತೊಂದು ಪ್ರವಾಸಿ ಕೇಂದ್ರವಾಗುವುದರಲ್ಲಿ ಸಂದೇಹವೇ ಇಲ್ಲ.
Post Your viewsಮುಖಪುಟ / ನೋಡು ಬಾ ನಮ್ಮೂರ |
ರ ಇತರೆ ಸುದ್ದಿ/ಲೇಖನಗಳನ್ನು ಓದಿ