clear
clear
clear
clear
ಮುಖಪುಟ » ಸುದ್ದಿಜಾಲ » ಪೂರ್ಣಪಾಠ
ಬಿಂಕದ ಸಿಂಗಾರಿ, ಧುಮ್ಮಿಕ್ಕುವ ಜಲನಾರಿ
[IST]
ಜಲಪಾತ ಅಂದಕೂಡಲೇ ನೆನಪಿಗೆ ಬರುವುದು ಮಾನವನಾಗಿ ಹುಟ್ಟಿದ ಮೇಲೆ ನೋಡಲೇಬೇಕಾದ ಜೋಗದ ಗುಂಡಿ. ಜೋಗದ ಭವ್ಯತೆಯೇ ಅಂಥಾದ್ದು . ಆದರೆ, ಜೋಗದಷ್ಟು ಭವ್ಯ, ಭಾರೀ ಅಲ್ಲದಿದ್ದರೂ ತಂತಮ್ಮ ಅನನ್ಯತೆ, ಸೌಂದರ್ಯಗಳಿಂದಾಗಿ ಮನ ಸೆಳೆವ ಜಲಪಾತಗಳು ಕರ್ನಾಟಕದಲ್ಲಿ ಸಾಕಷ್ಟಿವೆ. ಅಂಥಾ ಕೆಲವು ಪ್ರಮುಖ ಜಲಪಾತಗಳನ್ನು ಹೆಕ್ಕಿ ತಂದಿದ್ದೇವೆ. ಜಲಲಲ .. ನೀರಹಾಡಿಗೆ ಮೈ- ಮನಸ್ಸು ಕೊಡಿ .

ಎತ್ತರದ ವೃಕ್ಷಗಳ ನಡುವೆ ಬಿತ್ತರಗೊಳ್ಳುವ ಅಬ್ಬಿ

Abbi Fallsಸೂರ್ಯ ಕಿರಣಗಳ ಮರೆಮಾಡುತ್ತ ಮುಗಿಲ ಚುಂಬಿಸುವ ವೃಕ್ಷಗಳ ನಡುವೆ ಕಣ್ಣು ತುಂಬುವ ಈ ಜಲಪಾತಕ್ಕೆ ಜೆಸ್ಸಿ ಫಾಲ್ಸ್‌ ಎನ್ನುವ ಹೆಸರೂ ಇದೆ. ಕನ್ನಡ ನಾಡಿನ ಜೀವನದಿ ಕಾವೇರಿಯ ಉಪನದಿಯ ಸೃಷ್ಟಿ ಈ ಅಬ್ಬಿ . ಕೊಡಗಿನ ಕೇಂದ್ರ ಮಡಿಕೇರಿಯಿಂದ 5 ಕಿಮೀ ದೂರದಲ್ಲಿದೆ.

ಹಾಲು ಹೊಳೆ.. ಹಾಲುನೊರೆ.. ಇದು ದೂದ್‌ಗಂಗಾ

Dood Gangaಹಾಲಿನ ಹೊಳೆಯೇ ಹುಚ್ಚಾಗಿ ಧುಮ್ಮಿಕ್ಕುವ ಸೊಬಗು ಗೋವಾದ ಕೊಲೆಂ ರೈಲ್ವೆ ನಿಲ್ದಾಣದಿಂದ 10 ಕಿಮೀ ದೂರದಲ್ಲಿದೆ. ಗೋವಾದ ರಾಜಧಾನಿ ಪಣಜಿಯಿಂದ ದೂದ್‌ ಗಂಗಾ ಜಲಪಾತಕ್ಕೆ ತಾಸಿನ ಹಾದಿ, ಅಂದರೆ 60 ಕಿಮೀ. ರೈಲಿನಲ್ಲೇ ಪ್ರಯಾಣಿಸಬೇಕು. ಚಾರಣಕ್ಕೂ ಅವಕಾಶವಿದೆ. ಈ ಸೊಬಗಿಗೆ ದೂದ್‌ಸಾಗರ್‌ ಎನ್ನುವ ಹೆಸರೂ ಇದೆ.

ಮುಗಿಲಿಂದ ಜಾರಿದ ಗಗನ ಚುಕ್ಕಿ- ಭರ ಚುಕ್ಕಿ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಘನತೆ ಪಡೆದಿರುವುದು ತನ್ನಲ್ಲಿನ ಜಲಪಾತ ಶಿವನಸಮುದ್ರದಿಂದ. ಕಾವೇರಿ ನದಿಯ ಸೋಜಿಗ ಈ ಜಲ ಧಾರೆ. ಗಗನ ಚುಕ್ಕಿ, ಭರ ಚುಕ್ಕಿ ಎನ್ನುವ ಕವಲುಗಳಾಗಿ ಲಾಳಾಕೃತಿಯಲ್ಲಿ ಜಲಪಾತ ಧುಮ್ಮಿಕ್ಕುತ್ತದೆ. ರಭಸ ಹೆಚ್ಚಾದಾಗ ನೋಡಬೇಕು, ಒಂದೇ ಕವಲಂತೆ ಕಾಣುವ ಭ್ರಮೆಯ. ಮೈಸೂರಿನಿಂದ 50 ಕಿಮೀ, ಬೆಂಗಳೂರಿನಿಂದ 76 ಕಿಮೀ ದೂರದಲ್ಲಿದೆ ಈ ಚೈತನ್ಯ, ಚೆಲುವಿನ ತಾಣ. ಅಂದಹಾಗೆ, ಭಾರತದಲ್ಲಿ ಮೊದಲ ಬಾರಿಗೆ ವಿದ್ಯುತ್‌ ಉತ್ಪಾದನೆಯಾದದ್ದು ಇಲ್ಲಿಯೇ.

ಗೋಕಾಕ ನೋಡದ ಕಣ್ಣುಗಳ್ಯಾಕ

Gokak Fallsಗೋಕಾಕದ ಚಲುವೇ ಅಂಥಾದ್ದು . ಕರ್ನಾಟಕದ ನಯಾಗರ ಎಂದೇ ಹೆಸರಾದ ಈ ಧಾರೆ ಬೆಳಗಾವಿಯಿಂದ 60 ಕಿಮೀ ದೂರದಲ್ಲಿದೆ. ಗೋಕಾಕ್‌ನಿಂದ ಐದೇ ಕಿಮೀ ಉದ್ದದ ಹಾದಿ. ಈ ಸೊಬಗು ಘಟಪ್ರಭೆಯ ಸೃಷ್ಟಿ . 162 ಅಡಿ ಎತ್ತರದಿಂದ ಧರೆಗಿಳಿಯುವ ಜಲಪಾತದ ಸದ್ದು ಒಂದು ಕಿಮೀ ದೂರದವರೆಗೆ ಮೊರೆಯುತ್ತದೆ. ಲಾಳಾಕಾರದ ಗೋಕಾಕ ಸೃಷ್ಟಿಸುವ ಹಾಲುನೊರೆಯ ಸೊಬಗು ನೋಡಿಯೇ ತಣಿಯಬೇಕು.

ಮಾನವನಾಗಿ ಹುಟ್ಟಿದ ಮ್ಯಾಲೆ ಕಾಣಲೇ ಬೇಕಾದ ಜೋಗದ ಗುಂಡಿ

Jog Fallsಗೋಕಾಕ ಕರ್ನಾಟಕದ ನಯಾಗರವಾದರೆ, ಜೋಗ ಭಾರತದ ನಯಾಗರ. ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಗಳ ನಡುವೆ ಜಲಲ ಧಾರೆಯ ನರ್ತನ. ಗೆರಸೊಪ್ಪೆ ಧಾರೆಯ ಮತ್ತೊಂದು ಹೆಸರು. ಶರಾವತಿ ಅಮ್ಮ . ತೀರ್ಥಹಳ್ಳಿ ಸಮೀಪದ ಅಂಬುತೀರ್ಥದಲ್ಲಿ ಉಗಮಿಸುವ ಶರಾವತಿ ಮೈದುಂಬಿ ಜೋಗವಾಗುತ್ತಾಳೆ. ಜೋಗಕ್ಕೆ ನಾಲ್ಕು ಮುಖ- ರಾಜ, ರಾಣಿ, ರೋರರ್‌, ರಾಕೆಟ್‌. 962 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಾಳೆ. ಸಾಗರದಿಂದ 35 ಕಿಮೀ ದೂರದಲ್ಲಿದೆ ಈ ನಯಾಗರ.

ಗರತಿಯ ತ್ಯಾಗ ನೆನಪಿಸುವ ಮದಗ

Madag Fallsಹಾವೇರಿ ಜಿಲ್ಲೆಯಲ್ಲಿರುವ ಮದಗ ಜಲಪಾತಕ್ಕೆ ರಾಣೆಬೆನ್ನೂರಿನಿಂದ 34 ಕಿಮೀ ದೂರದ ಹಾದಿ. ಹಸಿರು ಸಿರಿಯ ನಡುವೆ 50 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ನೋಡುಗರ ಮೈ ಮರೆಸುತ್ತದೆ. ಗರತಿಯ ತ್ಯಾಗದ ಜನಪದ ಐತಿಹ್ಯವನ್ನು ಹೊಂದಿರುವ ಮದಗದ ಕೆರೆ ಜಲಪಾತದ ಪಕ್ಕದಲ್ಲಿದೆ. ಇದರಿಂದಾಗಿಯೇ ಮಾಯದಂಥಾ ಮಳೆ ಬಂತಣ್ಣಾ ಮದಗದ ಕೆರೆಗೆ ಹಾಡು ಜಲಪಾತ ನೋಡುವಾಗ ನಿಮಗೆ ನೆನಪಾಗುತ್ತದೆ.

ನಾಲ್ಕು ಹೋಳಾಗಿ ಧುಮ್ಮಿಕ್ಕುವ ಮಹಾಶ್ವೇತೆ ಸಾತೊಡ್ಡಿ

ಯಲ್ಲಾಪುರದಿಂದ 20 ಕಿಮೀ ದೂರದಲ್ಲಿ ಸಾತೊಡ್ಡಿ ಜಲಪಾತ ಧುಮ್ಮಿಕ್ಕುತ್ತಿದೆ. ನಾಲ್ಕು ಹೋಳಾಗಿ 300 ಅಡಿ ಆಳಕ್ಕೆ ಇಳಿಯುವ ಸಾತೊಡ್ಡಿ ದೆಬ್ಬೇಸಾಲು ಎಂದೂ ಜನಪ್ರಿಯಳು. ಹಸಿರು ಹೊದಿಕೆಯ ನಡುವೆ ಹರಿಯುವ ಈ ಮಹಾಶ್ವೇತೆ ಕೊನೆಗಾಣುವುದು ಕಾಳಿ ನದಿಯಲ್ಲಿ.

ವಾರ್ತಾಸಂಚಯ
ಜಲಪಾತಗಳ ನೀರ ಹಾಡು
ಹುಲ್ಲಾಗು ಬೆಟ್ಟದ ಮೇಲೆ, ಕಲ್ಲಾಗು ಕಷ್ಟಗಳ ಮಳೆ ಸುರಿಯೆ..
ಕರ್ನಾಟಕದ ಬೀಚ್‌ಗಳು

Click here to go to top
ಮುಖಪುಟ / ನೋಡು ಬಾ ನಮ್ಮೂರ
ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು