ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು.....ಜಿಟಿ ಜಿಟಿ ಮಳೆಯಲ್ಲಿ ಮಳೆಯಲ್ಲಿ ನೆನೆಯುತ್ತಲೋ, ಆತ್ಮೀಯರೊಂದಿಗೆ ಹರಟೆಕೊಚ್ಚುತ್ತಲೋ ಮಳೆಗಾಲದಲ್ಲಿ ಜಲಪಾತಗಳ ತಾಣಕ್ಕೆ ಹೆಜ್ಜೆಯಿಟ್ಟರೆ ಬೇಂದ್ರೆಯವರ ಈ ಹಾಡು ನೆನಪಿಗೆ ಬರುತ್ತದೆ. ಮಲೆನಾಡ ದಟ್ಟ ಕಾಡಿನ ನಡುವೆ ಹರಿವ ಅನೇಕ ನದಿಗಳು ಜಲಪಾತಗಳಿಗೆ ಮಳೆಗಾಲ ಜೀವಕಳೆ ತರುತ್ತವೆ. ಕಡಿದಾದ ಕಣಿವೆಗಳಲ್ಲಿ ಹಸಿರ ಹೊನಲಿನ ನಡುವೆ ಬಿಳಿ ಸೀರೆ ಉಟ್ಟಂತೆ ಕಾಣುವ ಜಲಪಾತಗಳು, ಸುಂದರಿಯ ಸೆರಗು ಬಿರುಗಾಳಿಗೆ ಹಾರಾಡುನಂತೆ ರಭಸವಾಗಿ ಭೋರ್ಗರೆಯುತ್ತ ನುಗ್ಗುವ ಪರಿ ವರ್ಣಿಸಲು ಪದಗಳು ಸಾಲದಾಗುತ್ತವೆ.
ನಾಲ್ಕು ತಿಂಗಳ ಬಿಸಿಲ ಬೇಗೆಯಲ್ಲಿ ನಲುಗಿ ಬಳ್ಳಿಯಂತಾಗುವ ಜಲಪಾತಗಳಿಗೆ ಮಳೆಗಾಲವೆಂಬ ವಸಂತಕಾಲ ಬಂದರೆ ಮುಗಿಯಿತು. ಕಲ್ಲು-ಬಂಡೆಗಳ ಬಳಸಿ, ಮೈಸವರಿಕೊಂಡು ಜುಳಜುಳನೆ ಹರಿವ ನೀರು ಜಲಧಾರೆಯಾಗಿ ದುಮ್ಮಿಕ್ಕುವ ದೃಶ್ಯ ವೈಭವವನ್ನು ವರ್ಣಿಸಲು ಪದಗಳು ಸಾಲದು.
ನೆಲಮುಗಿಲುಗಳ ಒಂದು ಮಾಡುವಂತೆ : ಇನಿಯನ ಎದೆಗೊರಗಿ ಪ್ರೇಯಸಿ ನಕ್ಕಂತೆ, ಅಮ್ಮನ ಕೊರಳ ಜಗ್ಗಿ ಹಿಡಿದ ಹಾಲುಗಲ್ಲದ ಮುಗು ಜಗತ್ತು ಮರೆತು ಆನಂದದಿಂದ ನೆಲದ ಕಡೆ ಜಾರುವಂತೆ, ನೆಲಮುಗಿಲುಗಳ ಒಂದು ಮಾಡುವಂತೆ ಸುರಿವ ವರ್ಷಧಾರೆಯಂತೆ ಈ ಜಲಪಾತಗಳು ಭೋರ್ಗರೆಯತೊಡಗುತ್ತವೆ.
ಕರ್ನಾಟಕ ಪ್ರಸಿದ್ಧ ಜಲಪಾತಗಳ ನಾಡು. ಅಮೆರಿಕದ ನಯಾಗರ ಬಿಟ್ಟರೆ ವಿಶ್ವದ ಜಲಪಾತಗಳ ಭೂಪಟದಲ್ಲಿ ಜೋಗದ ಜಲಪಾತಕ್ಕೆ ಅಗ್ರಸ್ಥಾನ. ಮುಂಗಾರಿನ ಉತ್ತಮ ಆರಂಭದಿಂದಾಗಿ ಜಲಪಾತಗಳು ಈಗ ಕಣ್ಣಿಗೆ ಹಬ್ಬವಾಗಿವೆ.
ಸುಮಾರು 900 ಅಡಿ ಎತ್ತರದಿಂದ ರಾಜ, ರಾಣಿ, ರೋರರ್, ರಾಕೆಟ್ ಹೆಸರಿನಲ್ಲಿ ಕವಲುಗಳಾಗಿ ದುಮ್ಮಿಕ್ಕುವ ಶರಾವತಿ ನದಿ ತಾಣ ಜೋಗ. ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಜೋಗದ ಜಲಪಾತ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಮ್ಯತೆಯ ತುತ್ತ ತುದಿ ಮುಟ್ಟುತ್ತದೆ.
ಕಲ್ಲತ್ತಗಿರಿ, ಮಾಣಿಕ್ಯಧಾರಾ : ಚಿಕ್ಕಮಗಳೂರು ಜಿಲ್ಲೆ ಕೆಮ್ಮಣ್ಣುಗುಂಡಿ ಗಿರಿಧಾಮದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಇನ್ನೊಂದು ಜಲಪಾತ ಹೆಬ್ಬೆ. 168 ಮೀಟರ್ ಎತ್ತರದಿಂದ ಜಲಧಾರೆ ದುಮ್ಮಿಕ್ಕುತ್ತದೆ. ಇದೇ ಗಿರಿಧಾಮದಿಂದ 10 ಕಿಲೋಮೀಟರ್ ದೂರವಿರುವ ಕಲ್ಲತ್ತಗಿರಿ ಜಲಪಾತದಲ್ಲಿ ಕೂಡಾ 122 ಅಡಿ ಎತ್ತರದಿಂದ ನೀರಿನ ದೃಶ್ಯ ಮನಮೋಹಕ. ಸಿಂಗರಿಸಿಕೊಂಡ ನವ ವಧುವಿನಂತೆ ದುಮುಕುವ ಮಾಣಿಕ್ಯಧಾರಾ ಜಲಪಾತ ಕಲ್ಲತ್ತಗಿರಿಗೆ ಹತ್ತಿರವಿರುವ ಧಾರ್ಮಿಕ ಪುಣ್ಯಭೂಮಿ ಬಾಬಾ ಬುಡನ್‌ಗಿರಿಗೆ ಸಮೀಪದಲ್ಲಿದೆ.
ಕಾರವಾರ ಜಿಲ್ಲೆ ಯಲ್ಲಾಪುರ ತಾಲೂಕಿನ ಮಾಗೋಡಿನಿಂದ ಸುಮಾರು ಐದು ಕಿಲೋಮೀಚರ್ ದೂರದಲ್ಲಿರುವ ಮಾಗೋಡಿಗೆ ಸಮೀಪವಿರುವ ಮಾಗೋಡು ಜಲಪಾತ ತನ್ನದೇ ವಿಶಿಷ್ಟ ಕಾರಣಗಳಿಗೆ ಪ್ರಸಿದ್ಧವಾಗಿದೆ. 180 ಮೀಟರ್ ಎತ್ತರದಿಂದ ಎರಡು ಧಾರೆಗಳಾಗಿ ಭೋರ್ಗರೆವ ಈ ಜಲಪಾತದ ವಯ್ಯಾರ, ವೈಭವವೇ ಒಂದು ಸೊಬಗು. ಸಿರ್ಸಿಯಿಂದ ಯಾಣಕ್ಕೆ ಹೋಗುವಾಗ 4 ಕಿಲೋಮೀಟರ್ ಹಿಂದಕ್ಕೆ ಅಂಕೋಲಾಕ್ಕೆ ಹೋಗುವ ದಾರಿಯಲ್ಲಿ ಬಲಕ್ಕೆ ಹೋದರೆ ಮಾಬಗೆ ಎಂಬ ಇನ್ನೊಂದು ಜಲಪಾತ ಸಿಗುತ್ತದೆ. ಸಿದ್ದಾಪುರ ತಾಲೂಕಿನಿಂದ 35 ಕಿಲೋಮೀಟರ್ ದೂರವಿರುವ ಮಿಂಚುಳ್ಳಿ ಎಂದೇ ಹೆಸರಾಗಿರುವ ಊಂಚಳ್ಳಿ ಜಲಪಾತ ವರ್ಷವಿಡೀ ದುಮ್ಮಿಕ್ಕುವ ಜಲಪಾತ ಎಂಬ ಹೆಗ್ಗಳಿಕೆ ಪಡೆದಿದೆ.
ಸಾತೊಡ್ಡಿ ,ಬೆಣ್ಣೆ ಜಲಪಾತ :

ಕಾರವಾರದ ಹೊನ್ನಾವರದಿಂದ 6 ಕಿಲೋಮೀಟರ್ ದೂರವಿರುವ ಅಪ್ಸರಕೊಂಡ ಜಲಪಾತದ ದೃಶ್ಯ ಅದರ ಹೆಸರಿನಷ್ಟೇ ಮೋಹಕವಾಗಿದೆ. ಕಾರವಾರದಿಂದ 140 ಕಿಲೋಮೀಟರ್ ದೂರವಿರುವ ಶಿವಗಂಗಾ ಜಲಪಾತ ಮತ್ತು ಇದರ ಸಮೀಪವಿರುವ ಲಾಲ್ಗುಳಿ ಜಲಪಾತ ಹಾಗೂ ಯಲ್ಲಾಪುರದಲ ಸಮೀಪವಿರುವ ಸಾತೊಡ್ಡಿ ಮತ್ತು ಶಿರಸಿ-ಕುಮಟಾ ಬಂಡಲದಿಂದ ಸ್ವಲ್ಪ ಮುಂದೆ ಹೊಸೂರು ಎಂಬ ಪುಟ್ಟ ಹಳ್ಳಿಯ ಮೂಲಕ ಹೋದರೆ ಸಿಗುವ ಬೆಣ್ಣೆ ಜಲಪಾತ, ಉತ್ತರಕರ್ನಾಟಕದಲ್ಲಿರುವ ಹೆಸರಾಂತ ಗೋಕಾಕ್ ಜಲಪಾತ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ 34 ಕಿಲೋಮೀಟರ್ ದೂರದಲ್ಲಿರುವ ಮದಗದ ಜಲಪಾತಗಳೂ ಕೂಡಾ ರಾಜ್ಯದ ಪ್ರಮುಖ ಜಲಪಾತಗಳ ಸಾಲಿನಲ್ಲಿ ನಿಲ್ಲುತ್ತವೆ.
ಮಂಡ್ಯದಿಂದ ಪೂರ್ವಕ್ಕೆ 85 ಕಿಲೋಮೀಟರ್ ದೂರವಿರುವ ಶಿವನಸಮುದ್ರದ ಬ್ಲಫ್ ಹತ್ತಿರ ಗಗನಚುಕ್ಕಿ, ಭರಚುಕ್ಕಿ ಹೆಸರಿನಲ್ಲಿ 75 ಮೀಟರ್ ಎತ್ತರದಿಂದ ಬೀಳುವ ಕಾವೇರಿ ನದಿ ಉಂಟುಮಾಡುವ ಜಲಪಾತ ಕೂಡಾ ಪ್ರಸಿದ್ಧವಾದುದು. ಜಲಪಾತಗಳನ್ನು ಜುಲೈ, ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ನೋಡಲು ಚನ್ನ. ಜಲಲ ಜಲಲ ಜಲಧಾರೆಗೆ ತಲೆದೂಗುವ, ಚುಮುಚುಮು ಮಳೆಯಲ್ಲಿ ಜಲಪಾತದ ಸಿಂಚನಕ್ಕೆ ಮುಖವೊಡ್ಡಬೇಕೆಂಬ ಆಸೆ ನಿಮಗಿದ್ದರೆ ವರ್ಷಕ್ಕೊಮ್ಮೆ ಬರುವ ನೀರ ಹಾಡಿನ ಈ ಹಬ್ಬಕ್ಕೆ ಸಜ್ಜಾಗಿ.
ಮುಖಪುಟ / ನೋಡು ಬಾ ನಮ್ಮೂರ
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.