ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿರುವ ಅಗ್ನಿ ಶ್ರೀಧರ್ ಅವರ 'ತಮಸ್ಸು' ಚಿತ್ರಕ್ಕೆ ಉದ್ಯಾನ ನಗರಿ ಬೆಂಗಳೂರು ಹಾಗೂ ಅದರ ಸುತ್ತಲ್ಲಿನ ಪ್ರದೇಶಗಳಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಹಾಗೂ ರವೀಂದ್ರ ನಿರ್ಮಿಸುತ್ತಿದ್ದಾರೆ.
ತಮ್ಮ ಸಂಸ್ಥೆಯ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ನಿರ್ಮಾಪಕರು ತಮ್ಮ ಸಂಸ್ಥೆಯ ನಾಲ್ಕನೇ ಕಾಣಿಕೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಆ ದಿನಗಳು' ಎಂಬ ಯಶಸ್ವಿ ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಪತ್ರಕರ್ತ ಅಗ್ನಿಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕಥೆಗಾರರಾಗಿರುವ ಅವರು ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ.
ವಿಶಿಷ್ಟ ಕಥಾ ಸಾರಾಂಶವುಳ್ಳ 'ತಮಸ್ಸು' ಚಿತ್ರದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದು, ಪದ್ಮಪ್ರಿಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಜಿರ್, ಹರ್ಷಿಕಾ ಪೂರ್ಣಚ್ಛ, ಆಸೀಫ್, ಸುಧಾ ಬೆಳವಾಡಿ, ಸತ್ಯ ಮುಂತಾದವರ ತಾರಾಬಳಗವೂ ಈ ಚಿತ್ರಕ್ಕಿದೆ.
ಸಂದೀಪ್ ಚೌಟರ ಸಂಗೀತವಿರುವ ಈ ಚಿತ್ರಕ್ಕೆ ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿದೆ. ನಾಗೇಂದ್ರ ಅರಸ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ, ಶಶಿಧರ್ ಅಡಪ ಕಲಾ ನಿರ್ದೇಶನ ಹಾಗೂ ಮಧುಗಿರಿ ಪ್ರಕಾಶ್ ಅವರ ನಿರ್ಮಾಣ ನಿರ್ವಹಣೆ ‘ತಮಸ್ಸು ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)