ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಿಂತ ಏಡ್ಸ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಭಾರತದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ. ಆದರೇನಂತೆ! ನಮ್ಮಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುವವರಿಲ್ಲ, ಸಲಿಂಗ ಕಾಮದ ಪ್ರವೃತ್ತಿಗಳನ್ನು ವಿವರಿಸುವವರಿಲ್ಲ, ಏಡ್ಸ್ ಮಾರಮ್ಮನ ಹಾವಳಿ ತಡೆಗಟ್ಟುವವರಿಲ್ಲ. ಹೋಗಲಿ, ಪ್ರಬಲ ಮಾಧ್ಯಮವಾಗಿರುವ ಸಿನಿಮಾ ಮೂಲಕವಾದರೂ ಸಾರ್ವಜನಿಕ ಹಿತಾಸಕ್ತಿಯ ಒಂದು ಸಿನಿಮಾ ನಿರ್ಮಿಸುವವರಿಲ್ಲ. 'ಫಿಲಡಲ್ಫಿಯ' ಮಾದರಿಯ ಒಂದು ಚಿತ್ರ ನಿರ್ಮಿಸಲು ಕನ್ನಡ ಸಂದರ್ಭದಲ್ಲಿ ಯಾರಾದರೂ ಮುಂದೆ ಬರುತ್ತಾರೇನು?
ಬರಹ : ಭರತ್ ಶಾಸ್ತ್ರೀ, ನ್ಯೂಜೆರ್ಸಿ, ಯುಎಸ್ಎ
ಇತ್ತೀಚೆಗೆ ಒಂದು ಉತ್ತಮ ಹಳೆಯ ಚಿತ್ರ 'ಫಿಲಡಲ್ಫಿಯ' ನೋಡಿದೆ. 1993ರಲ್ಲಿ ನಿರ್ಮಿತವಾದ ಟಾಮ್ ಹಾಂಕ್ಸ್ ಮತ್ತು ಡೆನ್ಜೆಲ್ ವಾಷಿಂಗ್ಟನ್‌ರ ಮನೋಜ್ಞ ಅಭಿನಯದ ಚಿತ್ರ.
ಸಲಿಂಗಕಾಮಿಯಾಗಿದ್ದು AIDS ಪೀಡಿತನಾದ ವಕೀಲ ಆಂಡ್ರ್ಯೂ ಬೆಕೆಟ್ (Andrew Becket - ಟಾಮ್ ಹಾಂಕ್ಸ್) ತಾನು ಕೆಲಸ ಮಾಡುತ್ತಿದ್ದ ನ್ಯಾಯ ಸಂಸ್ಥೆಯಿಂದ ಹೊರದೂಡಲ್ಪಡುತ್ತಾನೆ. ತನಗಾದ ಅನ್ಯಾಯಕ್ಕೆ ಕೋರ್ಟಿನ ಕಟ್ಟೆ ಹತ್ತುತ್ತಾನೆ. ಅವನ ಪರವಾಗಿ ವಕಾಲತ್ತು ವಹಿಸಲು ಜೋ ಮಿಲ್ಲರ್ (Joe Miller - ಡೆನ್ಜೆಲ್ ವಾಷಿಂಗ್ಟನ್) ಮೊದಲು ನಿರಾಕರಿಸಿದರೂ ನಂತರ ಒಪ್ಪಿಕೊಳ್ಳುತ್ತಾನೆ. ರೋಚಕವಾಗಿ ನಡೆದ ವಿಚಾರಣೆಯಲ್ಲಿ ಆಂಡ್ರ್ಯೂನನ್ನು ಕೆಲಸದಿಂದ ತೆಗೆದು ಹಾಕಿದ ನಿರ್ಣಯ ಕಾನೂನು ಬಾಹಿರವೆಂದು ಸಾಬೀತಾಗುತ್ತದೆ. ಕೋರ್ಟು ಈ ತೀರ್ಪನ್ನು ನೀಡಿ, ಬೃಹತ್ ಮೊತ್ತದ ಪರಿಹಾರವನ್ನು ಘೋಷಿಸಿದ ನಂತರ ರೋಗ ಉಲ್ಬಣಿಸಿ ಆಂಡ್ರ್ಯೂ ಸತ್ತುಹೋಗುತ್ತಾನೆ. ಈ ಚಿತ್ರ ಅಮೆರಿಕದ ಜನತೆ 'ಗೇ' ಗಳ ಬಗ್ಗೆ ಇಟ್ಟುಕೊಂಡ ದೃಷ್ಟಿಯನ್ನು ಕೊಂಚ ಬದಲಾಯಿಸಿತು ಎಂದರೆ ಅತಿಶಯೋಕ್ತಿ ಎನ್ನಿಸಲಾರದು.
ಚಿತ್ರ ನೋಡಿದ ನಂತರ ನನ್ನ ಮನಸ್ಸು AIDS, ಲೈಂಗಿಕವಾಗಿ ಹರಡುವ ರೋಗಗಳು, ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಚಿಂತಿಸತೊಡಗಿತು. ಇಂಥದ್ದೊಂದು ಚಿತ್ರ ನಮ್ಮಲ್ಲಿ ತಯಾರಾದರೆ ಅದಕ್ಕೆ ಪ್ರತಿಕ್ರಿಯೆ ಹೇಗಿರಬಹುದು, ಅಂತ. ಜನ ಬೆಚ್ಚಿ ಬೀಳಬಹುದೆ? ನಮ್ಮ ಸಮಾಜದ moral police ಮುಗಿಬೀಳಬಹುದೆ? 1993ರಿಂದ 2008ರವರೆಗೆ ಕಾಲ ಸಾಕಷ್ಟು ಬದಲಾಗಿದೆ. ವೈದ್ಯಕೀಯ ಕ್ಷೇತ್ರ ಇಂದು ಏಯ್ಡ್ಸ್ ರೋಗದ ಮೇಲೆ ಗಣನೀಯ ಹತೋಟಿ ಸಾಧಿಸಿದೆ. ಔದ್ಯೋಗೀಕೃತ ಜಗತ್ತಿನಲ್ಲಿ ಇಂದು ಏಯ್ಡ್ಸ್ ಬಗ್ಗೆ ಈ ಹಿಂದೆ ಇದ್ದಷ್ಟು ಭಯ ಇಲ್ಲ. Diabetes, ರಕ್ತದೊತ್ತಡ, ಇಂತಹ ಖಾಯಿಲೆಗಳಂತೆಯೇ ಇದಕ್ಕೂ ಈಗ ಚಿಕಿತ್ಸೆ ಲಭ್ಯವಿದೆ.
ಆದರೆ ಇದುವರೆಗೆ ಸಾಧ್ಯವಾಗಿರುವುದು ಕೇವಲ control ಮಾತ್ರ, cure ಅಲ್ಲ! ಏಯ್ಡ್ಸ್ ಹರಡುವ ಮಾರ್ಗಗಳು, ಸೋಂಕು ತಗಲುವವರ ಲಿಂಗ ವೈಶಿಷ್ಟ್ಯ, ಅದರ ದೂರಗಾಮೀ ಪರಿಣಾಮಗಳು, ಮತ್ತದರ ಔಷಧ ಸೇವನೆಯ ಅಡ್ಡ ಪರಿಣಾಮಗಳು, ಇವುಗಳ ಚಿತ್ರಣ ಬದಲಾಗಿದೆ. ಮೊದ ಮೊದಲಿಗೆ ಕೇವಲ ಡ್ರಗ್ ಅಡಿಕ್ಟ್ಸ್, ಅದೂ ಇಂಟ್ರಾವೀನಸ್ ಡ್ರಗ್ ಬಳಸುವವರಲ್ಲಿ, ಗಂಡಸರೊಂದಿಗೆ ಸೆಕ್ಸ್ ಪಡೆಯುತ್ತಿದ್ದ ಗಂಡಸರಲ್ಲಿ ಕಂಡು ಬರುತ್ತಿದ್ದ ಈ ಖಾಯಿಲೆ ಅಭಿವೃದ್ಧಿಶೀಲ ದೇಶಗಳಲ್ಲಿ ಉಭಯ ಲಿಂಗದವರಲ್ಲೂ ಕಂಡುಬಂದು, ವಿಶೇಷತಃ ಮೈ-ಮಾರುವ ಕಸುಬಿನವರಲ್ಲಿ ಹರಡಿ, ಕುಗ್ರಾಮಗಳಿಗೂ ವ್ಯಾಪಿಸಿದೆ.
ಸೋಂಕು ತಗುಲಿದ ತಾಯಂದಿರಿಗೆ ಹುಟ್ಟುವ ಮಕ್ಕಳಲ್ಲಿ ಜನನದ ಸಂದರ್ಭದಲ್ಲಿ ಅಥವಾ ಎದೆಹಾಲಿನ ಮೂಲಕ ಹರಡುತ್ತದೆ. ಭಾರತದಲ್ಲಿ ಈಗ ಲೈಂಗಿಕವಾಗಿ ಹರಡುವ ರೋಗಗಳಲ್ಲಿ ಏಯ್ಡ್ಸ್ ಗೆ ಮುಖ್ಯಸ್ಥಾನ ಎಂಬುದರಲ್ಲಿ ಸಂಶಯವಿಲ್ಲ. ಈ ವಿಷಮ ಪರಿಸ್ಥಿತಿಯಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ನಾವೇನು ಪ್ರಯತ್ನ ಮಾಡಿದ್ದೇವೆ ಎಂಬ ಪ್ರಶ್ನೆಗೆ ಉತ್ತರಿಸಲು ಕಷ್ಟವಾಗುತ್ತದೆ.
ಕಳೆದ ಎರಡು ಮೂರು ವರ್ಷಗಳಲ್ಲಿ ಲೈಂಗಿಕ ಶಿಕ್ಷಣದ ಹೆಸರಿನಲ್ಲಿ ನೀಡ ಹೊರಟ ಶಿಕ್ಷಣ ಒಂದು ವಿಡಂಬನೆ. ಆದರೆ ಅದರ ಬದಲಿಗೆ ಏನಿದೆ? ಈ ದಿಸೆಯಲ್ಲಿ ಏನು ಪ್ರಯತ್ನಗಳು ನಡೆದಿವೆ? ನಮ್ಮ ಶಿಕ್ಷಣ ತಜ್ಞರು, ಚಿಂತಕರು, ಮತ್ತು ಪ್ರಜಾಪ್ರತಿನಿಧಿಗಳು ಈ ಕೊರತೆಗೆ ಹೇಗೆ ಉತ್ತರಿಸುತ್ತಾರೆ? "ನಮ್ಮದು ಸಂಪ್ರದಾಯ ಬದ್ಧ ಸಮಾಜ.." ಅಂತಲೋ "ನಮ್ಮ ಸಂಸ್ಕೃತಿಗೆ ಅನುಗುಣವಾದ, ಮಕ್ಕಳಿಗೆ ಸೂಕ್ತವಾದ.." ಎಂದೋ (ಬ್ಲಾ..ಬ್ಲಾ) ಯಾವುದೇ ನಿಖರ ಉತ್ತರವಿಲ್ಲದ, ಅಸ್ಪಷ್ಟ ರೀತಿಯಲ್ಲಿ ಹೇಳಿಕೆಗಳು ಮೂಡಿ ಬರುತ್ತವೆ.
ದುರದೃಷ್ಟವಶಾತ್, ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ಹಾಸ್ಯಾಸ್ಪದ ಮಾತ್ರವಲ್ಲ, ಅನಾಹುತಕಾರಿ ಕೂಡ. ಏಯ್ಡ್ಸ್, ಲೈಂಗಿಕ ಸೋಂಕುರೋಗಗಳು, ಗರ್ಭಧಾರಣೆ, ಬಸಿರು ತಾಯ್ತನಗಳ ಬಗ್ಗೆ ನಮ್ಮ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ, ಕುಡಿಮೀಸೆಯೊಡೆದ ತರುಣರ, ಮೊಡವೆ ಬಂದ ಹುಡುಗಿಯರ ಗಾಸಿಪ್‌ಗಳಲ್ಲಿ, ಅಥವಾ "ನಾನು ಹೇಳಿದಷ್ಟು ಕೇಳು" ಎನ್ನುವ ರೀತಿಯ ಸೀನಿಯರ್-ಜೂನಿಯರ್ ವಿದ್ಯಾರ್ಥಿಗಳ ಸಂಭಾಷಣೆಗಳಲ್ಲಿ ಅಷ್ಟೆ! ಎಷ್ಟು ತಂದೆ-ತಾಯಂದಿರಿಗೆ ನೈಜ ಕಳಕಳಿಯಿಂದ ತಮ್ಮ ಮಕ್ಕಳಿಗೆ ಈ ಶಿಕ್ಷಣವನ್ನು ಕೊಡುವುದು ಸಾಧ್ಯವಾಗುತ್ತದೆ?
"ಇದರ ಅಗತ್ಯವೇನೂ ಇಲ್ಲ, ಇಲ್ಲಿಯವರೆಗೂ ಜನ ಬಾಳಿ ಬದುಕಲಿಲ್ಲವೆ?" "ನಮ್ಮ ಹಿಂದಿನ ಪೀಳಿಗೆಯವರಿಗೆ ಇಂತಹ ಶಿಕ್ಷಣ ಸಿಕ್ಕಿತ್ತೆ" ಎಂದು ಮೂಗುಮುರಿಯುವವರಿಗೆ ಕಣ್ಣ ಮುಂದೆ ಇರುವ ಅಂಕಿಅಂಶಗಳೇ ಉತ್ತರ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ ಜಾಗತಿಕ AIDS ವರದಿಯ ಪ್ರಕಾರ, ಭಾರತದಲ್ಲಿ ಏಯ್ಡ್ಸ್ ಪೀಡಿತರ ಅಂದಾಜು ಸಂಖ್ಯೆ 1993ರಲ್ಲಿ 1000ಕ್ಕೂ ಕಡಿಮೆ. ಅದೇ 2007ರಲ್ಲಿ ಅಂದಾಜು ಸಂಖ್ಯೆ 24 ಲಕ್ಷ! ಇಡೀ ಪ್ರಪಂಚದಲ್ಲಿ ಬಸಿರು ಮತ್ತು ಹೆರಿಗೆ ಸಂಬಂಧಿಸಿದಂತೆ ಸಾಯುವ ಪ್ರತಿ ಐವರು ಸ್ತ್ರೀಯರಲ್ಲಿ ಒಬ್ಬ ಭಾರತೀಯ ಸ್ತ್ರೀ ಸಾಯುತ್ತಾಳೆ! ಜನಿಸಿದ ಒಂದು ವರ್ಷದೊಳಗೇ ಮರಣಿಸುವ ಶಿಶುಗಳ ಸಂಖ್ಯೆ ಪ್ರತಿ ಸಾವಿರಕ್ಕೆ 32!
ಲೈಂಗಿಕ ಶಿಕ್ಷಣ ಈ ನಿಟ್ಟಿನಲ್ಲಿ ಅರಿವನ್ನು ಮೂಡಿಸಲು ಸಾಧ್ಯ. ಈ ಶಿಕ್ಷಣದ ಉದ್ದೇಶವೇ ಆರೋಗ್ಯವಂತ, ಸ್ವಾಸ್ಥ್ಯ ಪೂರ್ಣ ಸಮಾಜದ ನಿರ್ಮಾಣ. ಲಂಗು ಲಗಾಮಿಲ್ಲದ, ವಿಶೃಂಖಲ ಸಮಾಜದ ನಿರ್ಮಾಣವಲ್ಲ! ಪ್ರಕೃತಿದತ್ತವಾಗಿ ಬರುವ ಲಾಲಸೆಯ ಬಗ್ಗೆ ಊಹಾಪೋಹಗಳನ್ನು, ಇಲ್ಲದ ಕಲ್ಪನೆಗಳನ್ನು, ಸಲ್ಲದ ಭಯವನ್ನು ಬಿಟ್ಟು ಬದುಕುವ ಸಮಾಜದ ನಿರ್ಮಾಣ.
ಮಕ್ಕಳಿಗೆ ಪೌರ ಶಿಕ್ಷಣ ನೀಡುವಂತೆ, ಟ್ರಾಫಿಕ್ಕಿನ ನಿಯಮಗಳನ್ನು ಕಲಿಸುವಂತೆ, ಹಾದಿಬೀದಿಯಲ್ಲಿ ದೂಳು ಮುಚ್ಚಿದ, ನೊಣ ಕೂತಿದ್ದ ತಿಂಡಿಗಳನ್ನು ತಿನ್ನಬೇಡ ಎಂದು ಹೇಳುವಂತೆ, ಲೈಂಗಿಕ ಶಿಕ್ಷಣವನ್ನು ನೀಡಬೇಕು. ಕೀಳು ಉತ್ಸುಕತೆಯನ್ನು ಪ್ರಚೋದಿಸದೆ, ಜವಾಬ್ದಾರಿಯುತ ಲೈಂಗಿಕ ಸಾಹಚರ್ಯವನ್ನು, ಸಮಾಜದ ಮೇಲೆ ಅದರ ಪರಿಣಾಮಗಳನ್ನು, ನಿರುದ್ವಿಗ್ನ ಸನ್ನಿವೇಶದಲ್ಲಿ, ಸಮಚಿತ್ತದ ಧ್ವನಿಯಲ್ಲಿ ಹೇಳಬಲ್ಲ ಶಿಕ್ಷಕ ಶಿಕ್ಷಕಿಯರ ಅಗತ್ಯ ಈ ಹಿಂದೆಂದಿಗಿಂತಲೂ ಬಹಳವಾಗಿ ಇದೆ.