3 ಮಾರ್ಚ್ 2008, ಜಮ್‍ಷೆಡ್ಜಿ ಟಾಟಾ ಅವರ 169ನೇ ಜನ್ಮದಿನ. ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day. 2008-09 ಭಾರತೀಯ ವಿಜ್ಞಾನಸಂಸ್ಥೆಯ ಶತಮಾನೋತ್ಸವ ವರ್ಷ ಕೂಡ. ತನ್ನಿಮಿತ್ತ ಲೇಖನ. ನವರತ್ನ ಸುಧೀರ್, ಬೆಂಗಳೂರು ಇಸವಿ 1822. ಈಗಿನ ಗುಜರಾತ್‍ನ ನವಸಾರಿ ಎಂಬ ಸಣ್ಣ ಊರಿನಲ್ಲಿ ಒಂದು ಬಡ ಪಾರಸೀ ಅಗ್ನಿ ದೇವಾಲಯದ ಪುರೋಹಿತರ ಕುಟುಂಬದಲ್ಲಿ ಜನಿಸಿದ ಮಗು ನಸ್ಸರ್‍ವಾನ್ಜೀ ಟಾಟಾ. ಹುಟ್ಟಿದ ಮಗುವನ್ನು ಕಂಡ ಜ್ಯೋತಿಷಿಯೊಬ್ಬರು “ ಈ ಮಗು ಬಹಳ ದೇಶ ವಿದೇಶಗಳ ಪ್ರಯಾಣ ಮಾಡಿ, ಹೇರಳ ಹಣ ಸಂಪಾದಿಸಿ ಏಳು ಮಹಡಿಯ ಮನೆ ಕಟ್ಟುತ್ತಾನೆ" ಅಂತ ಭವಿಷ್ಯ ನುಡಿದರು. ಇದನ್ನು ನಂಬಲಾಗದ ತಂದೆ ತಾಯಿಗಳು ಜ್ಯೋತಿಷಿಗೆ ಅವಮಾನವಾಗದಿರಲಿ ಅಂತ ಸುಮ್ಮನೆ ಮುಗುಳ್ನಕ್ಕು ದಕ್ಷಿಣೆ ಕೊಟ್ಟು ಕಳಿಸಿದರು. ಆ ಚಾಣಾಕ್ಷ ಮಗು ಬೆಳೆದು ದೊಡ್ಡವನಾಗಿ ವಂಶಪಾರಂಪರ್ಯವಾದ ಪೌರೋಹಿತ್ಯ ತ್ಯಜಿಸಿ, ವ್ಯಾಪಾರ ವಹಿವಾಟಿನಲ್ಲಿ ಪಾರಂಗತನಾಗಿ, ದೇಶ ವಿದೇಶ ಪರ್ಯಟಿಸಿ ಭವಿಷ್ಯವಾಣಿಯನ್ನು ನಿಜಮಾಡಿದ. ಹೇರಳ ಸಂಪತ್ತನ್ನು ಗಳಿಸಿ ಮುಂಬೈನಗರದಲ್ಲಿ ಒಂದು ಏಳು ಮಹಡಿಯ ಮನೆಯನ್ನು ಕೂಡ ಕೊಳ್ಳಲು ಸಾಧ್ಯವಾಯಿತು.
ಹದಿನಾರು ವರ್ಷದವರಾಗಿದ್ದಾಗಲೇ ಜೀವನ್‍ಬಾಯಿಯೊಡನೆ ವಿವಾಹವಾಯಿತು. 3ನೇ ಮಾರ್ಚ್
1839ರಂದು ನವಸಾರಿಯಲ್ಲಿಯೇ ಜೇಷ್ಠ ಪುತ್ರ ಜಮ್‍ಶೆಡ್ಜೀಯವರ ಜನ್ಮವಾಯಿತು. ವಂಶದ ಸಂಪ್ರದಾಯಕ್ಕೆ ತಕ್ಕಂತೆಯೇ ಜಮ್‍ಶೆಡ್ಜಿ ಕೂಡ ಪೌರೋಹಿತ್ಯಕ್ಕೆ ಬೇಕಾದ ಆಚಾರ ಸಂಸ್ಕಾರಗಳನ್ನು ಕಲಿಯಲಾರಂಭಿಸಿದರು. ಶಾಲೆಗೆ ಹೋಗಿ ಕಲಿಯಬೇಕೆಂಬ ನಿರ್ವಾಹವೂ ಆಗಿನ ದಿನಗಳಲ್ಲಿ ಇರಲಿಲ್ಲ. ಆದರೆ ಅವರ ಹದಿಮೂರನೆ ವಯಸ್ಸಿನಲ್ಲೇ ತಂದೆ ನಸ್ಸೆರ್‍ವಾನ್ಜೀ ಅವರನ್ನು ಮುಂಬೈಗೆ ಕರೆತಂದು ಮೊದಲು ಮನೆಯಲ್ಲಿಯೇ ಆಮೇಲೆ ಎಲ್ಫಿನ್‍ಸ್ಟೋನ್ ಕಾಲೇಜಿನಲ್ಲಿ ಶಿಕ್ಷಣ ಕೊಡಿಸಲು ಏರ್ಪಾಡು ಮಾಡಿದರು. ಕುಶಾಗ್ರ ಮತಿಯ ಯುವಕ ಬಹು ಬೇಗ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ೧೮೫೮ರಲ್ಲಿಯೇ ಪದವೀಧರನಾದನು. ಉತ್ತಮ ಪುಸ್ತಕಗಳನ್ನು ಓದ ಜ್ಞಾನ ವಿಸ್ತಾರಮಾಡಿಕೊಳ್ಳುವ ಗೀಳು ಹತ್ತಿದ್ದೂ ಇಲ್ಲಿಯೇ. ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ತನಗಿಂತ ಐದು ವರ್ಷ ಚಿಕ್ಕವಳಾದ ಒಬ್ಬ ಪುರೋಹಿತರ ಮಗಳು ಹೀರಾಬಾಯಿಯೊಡನೆ ವಿವಾಹ ಕೂಡ ಜರುಗಿತು.
ಮೊದ ಮೊದಲು ಒಬ್ಬ ವಕೀಲರ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಜಮ್‍ಶೆಡ್ಜಿಗೆ ಬಹುಬೇಗ ತಂದೆಯಾಗುವ ಯೋಗ ಬಂದಿತು. ಹಿರಿಯ ಮಗ ದೊರಾಬ್‍ನ ಜನ್ಮ 1859ರಲ್ಲಿ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಹೆಸರಾದ ಸಿಪಾಯಿ ದಂಗೆ ಮುಗಿದ ಕೇವಲ ಎರಡು ವರ್ಷಗಳು ಕೂಡ ಕಳೆದಿರಲಿಲ್ಲ. ವ್ಯಾಪಾರ ವಹಿವಾಟಿಗೆ ಅನುಕೂಲ ಸಮಯವೂ ಅದಾಗಿರಲಿಲ್ಲ. ತಂದೆಯಾದ ಹೊಣೆಗಾರಿಕೆ ಬೇರೆ. ಹಣ ಸಂಪಾದಿಸಲೇ ಬೇಕಿತ್ತು. ಹೀಗಾಗಿ ಅವರು ವಕೀಲರ ಸಂಸ್ಥೆಯ ಕೆಲಸ ತ್ಯಜಿಸಿ ತಂದೆಯವರ ಆಯಾತ ನಿರ್ಯಾತ ನಡೆಸುತ್ತಿದ್ದ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಉತ್ತಮ ವಿದ್ಯಾಭ್ಯಾಸದ ತಳಹದಿ, ತೀಕ್ಷ್ಣ ಬುಧ್ಧಿ, ಮತ್ತು ತಂದೆಯವರ ಮಾರ್ಗದರ್ಶನದಿಂದ ಜಮ್‍ಶೆಡ್ಜೀ ಬಹುಬೇಗ ವ್ಯಾಪಾರ ಮತ್ತು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ನುರಿತವರಾದರು.
1864ರಲ್ಲಿ ಇಪ್ಪತ್ತೈದು ವರ್ಷ ವಯಸ್ಸಿನ ಯುವಕ ಜಮ್‍ಶೆಡ್ಜಿ ಮೊದಲ ಬಾರಿಗೆ ತಮ್ಮಕಂಪನಿಯ ವತಿಯಿಂದ ಇಂಗ್ಲೆಂಡಿನ ಪ್ರವಾಸ ಕೈಗೊಂಡರು. ಅವರ ಸಂಸ್ಥೆ ಅದಾಗಲೇ ಭಾರತದಿಂದ ಹೇರಳ ಪ್ರಮಾಣದಲ್ಲಿ ಹತ್ತಿಯನ್ನು ಇಂಗ್ಲೆಂಡಿನ ಲಿವರ್‍ಪೂಲ್ ‍ನಲ್ಲಿನ ಟೆಕ್ಸ್‍ಟೈಲ್ ಮಿಲ್ಲುಗಳಿಗೆ ನಿರ್ಯಾತ ಮಾಡುತ್ತಿತ್ತು. ಈ ಪ್ರವಾಸದಲ್ಲಿಮ್ಯಾನ್‍ಚೆಸ್ಟರ್ ಮತ್ತು ಲ್ಯಾಂಕಶೈರ್ ನಗರಗಳಲ್ಲಿನ ಕಾಟನ್ ಮಿಲ್ಲುಗಳನ್ನು ಅಧ್ಯಯನ ಮಾಡುವ ಅವಕಾಶ ದೊರಕಿತು. ಸುಮಾರು ಹತ್ತು ವರ್ಷಗಳ ಕಾಲ ಆ ಉದ್ಯಮದ ಎಲ್ಲ ಮುಖಗಳನ್ನು ಪರಿಚಯಿಸಿಕೊಂಡ ಜಮ್‍ಶೆಡ್ಜಿ ಭಾರತಕ್ಕೆ ಹಿಂತಿರುಗಿ ಬಂದರು. ಅದುವರೆಗೂ ಕೇವಲ ಬ್ರಿಟಿಷರ ಹತೋಟಿಯಲ್ಲಿದ್ದ ಟೆಕ್ಸ್‍ಟೈಲ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂದ ಪ್ರಥಮ ಭಾರತೀಯರಾದರು.
ಎಲ್ಲರಂತೆ ಹೊಸ ಮಿಲ್ಲನ್ನು ಮುಂಬೈನಲ್ಲಿ ಸ್ಥಾಪಿಸದೆ, ಮಹಾರಾಷ್ಟ್ರದ ಹತ್ತಿ ಬೆಳೆಯ ಕೇಂದ್ರವಾದ ನಾಗಪುರದಲ್ಲಿಸ್ಥಾಪಿಸಲೆಣಿಸಿದರು. 1874ರಲ್ಲಿ ಒಂದೂವರೆ ಲಕ್ಷ ರೂಪಾಯಿನ ಬಂಡವಾಳದಿಂದ ಸೆಂಟ್ರಲ್ ಇಂಡಿಯಾ ಸ್ಪಿನ್ನಿಂಗ್ ವೀವಿಂಗ್ ಅಂಡ್ ಮ್ಯಾನುಫಾಕ್ಚರಿಂಗ್ ಕಂಪನಿ ಅಸ್ಥಿತ್ವಕ್ಕೆ ಬಂದಿತು. 1877ರ ಜನವರಿಯಲ್ಲಿ ರಾಣಿ ವಿಕ್ಟೋರಿಯಾ ಭಾರತದ ಚಕ್ರವರ್ತಿನಿಯಾಗಿ ಅಭಿಷಿಕ್ತಳಾದ ಸಂದರ್ಭದಲ್ಲಿ ಎಂಪ್ರೆಸ್ ಮಿಲ್ ಹೆಸರಿನ ಒಂದು ಅತ್ಯಾಧುನಿಕ ಟೆಕ್ಸ್‍ಟೈಲ್ ಮಿಲ್ ಒಂದನ್ನು ನಾಗಪುರದಲ್ಲಿಪ್ರಾರಂಭಿಸಿದರು. ಭಾರತೀಯ ಒಡೆತನದ ಪ್ರಪ್ರಥಮ ಮಿಲ್. ಇಲ್ಲಿಯ ಬ್ರಿಟಿಷ್ ಆಡಳಿತದ ಭಾರತ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಯಾವ ರೀತಿಯ ಕಾನೂನು ನಿಯಮ ನಿರ್ಬಂಧಗಳನ್ನು ವಿಧಿಸದಿದ್ದಾಗಲೂ ಜಮ್‍ಶೆಡ್ಜಿ ತಮ್ಮ ಮಿಲ್‍ನಲ್ಲಿ ಸ್ವಪ್ರೇರಣೆಯಿಂದ ಕಾರ್ಮಿಕರ ಪರವಾದ ಅನೇಕ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು.
ಅಪ್ರತಿಮ ದೇಶಭಕ್ತರಾದ ಅವರಿಗೆ ದಾದಾಭಾಯ್ ನವರೋಜಿ , ಫಿರೋಜ್‍ಶಾ ಮೆಹ್ತಾರಂತಹ ಸ್ವತಂತ್ರ ಸೇನಾನಿಗಳ ನಿಕಟ ಸಂಪರ್ಕವಿತ್ತು. ಇದರ ಜೊತೆಗೇ ಅವರಿಗೆ ಭಾರತದ ಪ್ರಜೆಗಳು ನಿಜವಾಗಿಯೂ ಸ್ವತಂತ್ರರಾಗಬೇಕಾದರೆ ರಾಜಕೀಯ ಸ್ವಾತಂತ್ರದೊಡನೆಯೇ ಅರ್ಥಿಕ ಸ್ವಾಯತ್ತತೆ ಬಹಳ ಮುಖ್ಯ ಎಂಬ ಅರಿವಿತ್ತು. ಆದ್ದರಿಂದ ಅವರು ಎಲ್ಲೇ ಪ್ರಯಾಣ ಮಾಡಲಿ ಯಾರನ್ನೇ ಭೇಟಿಯಾಗಲಿ ಸದಾಕಾಲ ಆಧುನಿಕ ಭಾರತದ ಕನಸು ಕಾಣುವುದೇ ಒಂದು ಪರಿಪಾಠವಾಗಿಹೋಯಿತು.
ಭಾರತಕ್ಕಾಗಿ ಅವರು ಕಂಡ ಕನಸುಗಳಲ್ಲಿ ಮಹತ್ತರವಾದದ್ದು ಈ ಕೆಳಗಿನವು. * ಭಾರತ ಉನ್ನತ ಶ್ರೇಣಿಯ ರಾಷ್ಟ್ರವೆನಿಸಿಕೊಳ್ಳಬೇಕಾದರೆ ಅಧುನಿಕ ಉಕ್ಕಿನ ಉದ್ಯಮ ಸ್ಥಾಪಿಸಬೇಕು. ಉಕ್ಕು ರಾಷ್ಟ್ರದ ಬೆನ್ನೆಲುಬಾಗಬೇಕು.
* ಭಾರತದಲ್ಲಿ ವಿಜ್ನಾನ ಮತ್ತು ತಂತ್ರಜ್ನಾನಗಳ ಕ್ಷೇತ್ರದಲ್ಲಿ ಮೂಲಭೂತ ಸಂಶೋಧನೆಯನ್ನು ಮುಕ್ತ
ವಾತಾವರಣದಲ್ಲಿ ನಡೆಸಲು ಸಾಧ್ಯವಾಗುವಂತಹ ವಿಶ್ವ ಸ್ತರದ ಸಂಸ್ಥೆಯನ್ನು ಸ್ಥಾಪಿಸಬೇಕು.
* ಭಾರತದಲ್ಲಿ ಒಂದು ಹೈಡ್ರೋ ಎಲೆಕ್ಟ್ರಿಕ್ ವಿದ್ಯುತ್ ಸ್ಥಾವರ ಸ್ಥಾಪಿಸಬೇಕು.
* ಭಾರತದಲ್ಲಿ ಭಾರತೀಯರಿಗೆ ಪ್ರವೇಶಾವಕಾಶವಿರುವ ಒಂದು ಲಕ್ಷುರಿ ಹೋಟೆಲ್ ಪ್ರಾರಂಭಿಸಬೇಕು.
ಆಗಿನ ಭಾರತ ಸರ್ಕಾರದಲ್ಲಿನ ಬ್ರಿಟಿಷ ಅಧಿಕಾರಿಗಳು ಅವರ ಹಾದಿಯಲ್ಲಿ ಒಡ್ಡಿದ ಅನೇಕ ಅಡಚಣೆಗಳನ್ನು ಲೆಕ್ಕಿಸದೆ ತಮ್ಮ ಉದ್ದೇಶ್ಯವನ್ನು ಸಾಧಿಸುವ ಛಲ ಹಿಡಿದು ತಮ್ಮ ಕನಸನ್ನು ನನಸಾಗಿಸಲು ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಬೇರೆಯವರಾಗಿದ್ದಿದ್ದರೆ ಯಾವಾಗಲೋ ಕೈಚೆಲ್ಲಿ ಕೂಡುತ್ತಿದ್ದರು. ವಿಪರ್ಯಾಸವೆಂದರೆ ಈ ಮೇಲಿನ ಪ್ರಥಮ ಮೂರು ಯೋಜನೆಗಳು ಕಾರ್ಯರೂಪಕ್ಕೆ ಬರುವುದನ್ನು ನೋಡುವ ಭಾಗ್ಯ ಜಮ್‍ಷೆಡ್ಜಿಯವರದಾಗಿರಲಿಲ್ಲ. 19 ಮೇ 1904ರಲ್ಲಿ ಜಮ್‍ಷೆಡ್ಜಿಯವರ ನಿಧನವಾಯಿತು. ಮುಂಬೈನಲ್ಲಿ 1902ರಲ್ಲಿ ಪ್ರಾರಂಭವಾದ ತಾಜ್‍ಮಹಲ್ ಹೋಟೆಲ್ ಅನಾವರಣವನ್ನು ನೋಡುವ ಭಾಗ್ಯ ಮಾತ್ರ ಅವರದಾಗಿತ್ತು.
ಆದರೆ ಅವರ ದೂರದೃಷ್ಟಿ ಮತ್ತು ಮುಂದಾಲೋಚನೆಗಳ ಪೂರ್ಣ ವಿವರಗಳು ಲಿಖಿತ ರೂಪದಲ್ಲಿ ವ್ಯಕ್ತಗೊಂಡಿದ್ದರಿಂದ ಅವರ ಯೋಜನೆಗಳನ್ನು ಸಾಕಾರಗೊಳಿಸಲು ಅವರ ಮಕ್ಕಳು ಮತ್ತು ಒಬ್ಬ ಸ್ವಾಮಿನಿಷ್ಠ ಅನುಯಾಯಿಗೆ ಸಾಧ್ಯವಾಯಿತು.
ಉಕ್ಕಿನ ಸ್ಥಾವರ: ತಮ್ಮ ಕಾಟನ್ ವ್ಯಾಪಾರದ ನಿಮಿತ್ತ ಅನೇಕ ಸಾರಿ ಇಂಗ್ಲೆಂಡ್‍ಗೆ ಪ್ರಯಾಣ ಮಾಡುತ್ತಿದ್ದ ಜಮ್‍ಶೆಡ್ಜಿ ಒಮ್ಮೆ ಮ್ಯಾನ್‍ಚೆಸ್ಟರ್‍ಗೆ ಭೇಟಿಯಿತ್ತಾಗ ಅಲ್ಲಿ ಸ್ಕಾಟ್ಲೆಂಡಿನ ಪ್ರಖ್ಯಾತ ಲೇಖಕ ಥಾಮಸ್ ಕಾರ್ಲೈಲ್‍ನ ಭಾಷಣ ಕೇಳುವ ಅವಕಾಶ ದೊರಕಿತು. ಭಾಷಣದಲ್ಲಿ ಒಂದು ವಾಕ್ಯ “the nation which gains control of iron soon acquires the control of gold" ಅವರ ಮನಸ್ಸಿನಲ್ಲಿ ನಾಟಿತು. ಭಾರತದಲ್ಲಿ ಒಂದು ಆಧುನಿಕ ಉಕ್ಕು ಉತ್ಪಾದನಾ ಸ್ಥಾವರ ಸ್ಥಾಪಿಸಬೇಕು ಎನ್ನುವ ಆಸೆ ಅವರ ಮನದಲ್ಲಿ ಮೊಳೆಯತೊಡಗಿತು. ಈ ಆಸೆ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ಮತ್ತಷ್ಟು ಪ್ರಬಲವಾಗಿ ಮುಂದೆ ಭಾರತದ ಸರ್ವ ಪ್ರಥಮ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಎಡೆಯಾಯಿತು.
೧೮೯೯ರಲ್ಲಿ ಕಾಸಿಪೋರ್ ಆರ್ಡಿನೆನ್ಸ್ ಕಾರ್ಖಾನೆಯ ಸೂಪರಿಡೆಂಟ್ ಆಗಿದ್ದ ಮೇಜರ್ ಆರ್. ಎಚ್. ಮಹೋನ್ ಭಾರತದಲ್ಲಿ ಉಕ್ಕಿನ ಉತ್ಪಾದನೆಯ ಸಂಭಾವನೆಯ ಬಗ್ಗೆ ಬರೆದ ವರದಿಯನ್ನು ಆಧರಿಸಿ ಆಗಿನ ವೈಸ್‍ರಾಯ್ ಲಾರ್ಡ್ ಕರ್ಜನ್ ಅನೇಕ ಬ್ರಿಟಿಷ್ ಉದ್ಯಮಿಗಳಿಗೆ ಬಂಡವಾಳ ಹೂಡಲು ಆಹ್ವಾನವಿತ್ತರು. ಗಣಿಗುತ್ತಿಗೆ ನಿಯಮಗಳನ್ನು ಸಡಿಲಗೊಡಿಸಿ, ಗಣಿಗಾರಿಕೆ ಉದ್ಯಮಕ್ಕೆ ಅನೇಕ ಸವಲತ್ತು ಒದಗಿಸಲು ಮುಂದಾದರು. ಬ್ರಿಟಿಷ್ ಉದ್ಯಮಿಗಳು ಯಾರೂ ಮುಂದೆ ಬರದಿದ್ದಾಗ ಜಮ್‍ಶೆಡ್ಜಿ ಈ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡು ಅತ್ಯಾಧುನಿಕ ಉಕ್ಕಿನ ಸ್ಥಾವರದ ನಿರ್ಮಾಣಕ್ಕೆ ಅಣಿಯಾದರು.ಟಾಟಾರವರ ಉಕ್ಕಿನ ಉತ್ಪಾದನಾ ಘಟಕದ ಸುದ್ದಿ ಬಯಲಾದಾಗ ಅವರನ್ನು ಲೇವಡಿ ಮಾಡಿದವರದೆಷ್ಟೋ ಮಂದಿ. ಗ್ರೇಟ್ ಇಂಡಿಯನ್ ಪೆನಿನ್ಸುಲಾರ್ ರೈಲ್ವೆಯ ಚೀಫ್ ಕಮೀಷನರ್ ಆಗಿದ್ದ ಸರ್ ಫ್ರೆಡರಿಕ್ ಅಪ್ಕಾಟ್ ಅವರ “ I promise to eat every pound of steel rail [the Tatas] succeed in making" ಹೇಳಿಕೆ ಜಮ್‍ಶೆಡ್ಜಿಯವರ ನಿರ್ಧಾರವನ್ನು ಇನ್ನೂ ಬಲಪಡಿಸಿತು.
ತಮ್ಮ ಆರೊಗ್ಯ ಸರಿ ಇಲ್ಲದಿದ್ದರೂ 1902ರಲ್ಲಿ ಅಮೇರಿಕದ ಪ್ರವಾಸ ಕೈಗೊಂಡರು. ಅಮೇರಿಕದ ಪ್ರಖ್ಯಾತ ಕನ್ಸಲ್ಟಿಂಗ್ ಎಂಜಿನಿಯರ್ ಚಾರ್ಲ್ಸ್ ಪೇಜ್ ಪೆರಿನ್ ನೆರವಿನಿಂದ ಬಿಹಾರದ ಸಾಕ್ಚಿಯ ಬಳಿ ಉಕ್ಕಿನ ಸ್ಥಾವರ ಸ್ಥಾಪಿಸುವುದು ಎಂಬ ನಿಶ್ಚಯವಾಯಿತು. ದುರದೃಷ್ಟವಶಾತ್ ತಮ್ಮ ಕನಸು ನನಸಾಗುವುದನ್ನು ಜಮ್‍ಷೆಡ್ಜಿ ನೋಡಲಾಗಲಿಲ್ಲ. ಟಾಟಾ ಐರನ್ ಅಂಡ್ ಸ್ಟೀಲ್ ವರ್ಕ್ಸ್ ಪ್ರಾರಂಭವಾಗಿದ್ದು ೧೯೧೨ರಲ್ಲಿ ಅಂದರೆ ಜಮ್‍ಷೆಡ್ಜಿಯವರ ನಿಧನದ ಎಂಟು ವರ್ಷಗಳ ನಂತರ. ಆಗಿನ ಸಾಕ್ಚಿ ಈಗಿನ ಝಾರ್ಖಂಡ್ ರಾಜ್ಯದ ಜಮ್‍ಷೆಡ್‍ಪುರ್.
ಮುಂದಿನಪುಟದಲ್ಲಿ: ಸ್ವಾಮಿ ವಿವೇಕಾನಂದ ಮತ್ತು ಟಾಟಾ...