
ಬರಹಗಾರನ ಅನುಭವ ಸಮೃದ್ಧವಾಗಿದ್ದಾಗ ಆತನ ಸಾಹಿತ್ಯವೂ ಶ್ರೀಮಂತವಾಗಿರುತ್ತದೆ. ಶಿವರಾಮಕಾರಂತರು ನಮಗೆ ಮೆಚ್ಚೆನಿಸುವುದೇ ಹೀಗೆ. ತೇಜಸ್ವಿ ಅವರ ಕೃತಿಗಳು ಸೊಗಸೆನಿಸುವುದು ಈ ಕಾರಣದಿಂದಾಗಿಯೇ. ಆದರೆ, ಅಂಥವರ ಸಂಖ್ಯೆ ಎಷ್ಟಿದೆ ಹೇಳಿ? ಈ ಅಪರೂಪದ ಸಾಲಿಗೆ ಸೇರಿದವರು ಡಾ. ಕೃಷ್ಣಾನಂದ ಕಾಮತ್.
ಕಾಲೇಜು- ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಬಂಧಿಯಾಗಿರುವ ಸಾರಸ್ವತ ಲೋಕದ ಏಕತಾನತೆಯನ್ನು ಮುರಿಯುವುದೇ ಕಾಮತರಂಥ ವಿವಿಧ ಅಭಿರುಚಿಗಳ ಆಲ್‌ರೌಂಡರ್‌ಗಳು. ಕಾಮತರನ್ನು ಯಾವ ವರ್ಗಕ್ಕೆ ಸೇರಿಸುವುದು ? ಲೇಖಕ- ವಿಜ್ಞಾನಿಯಾಗಿ ಮಾತ್ರವಲ್ಲದೆ ಛಾಯಾಗ್ರಾಹಕರಾಗಿ, ಚಿತ್ರಕಾರರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಅವರು ಪ್ರಸಿದ್ಧರು. ಪರಿಸರ-ಪ್ರಾಣಿ ಸಾಹಿತ್ಯದಲ್ಲೂ ಸಿದ್ಧಹಸ್ತರು. ಡಾಟ್‌ಕಾಂ ಜಗತ್ತಿನಲ್ಲೂ ಕಾಮತ್ ಚಿರಪರಿಚಿತ ಹೆಸರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ- ಸಮಾಜದ ಕನ್ನಡಿಯಂತಿರುವ
www.kamat.com ‘ಕಾಮತ್ ಕುಟುಂಬದ’ ಸೃಜನಶೀಲತೆಯ ಪ್ರತಿಬಿಂಬ.
ಕಾಮತರ ಬದುಕಿನ ‘ಜ್ಯೋತ್ಸಾ ್ನ’
ಕೃಷ್ಣಾನಂದ ಕಾಮತ್ ಎಂದ ಕೂಡಲೇ ಸಹೃದಯರಿಗೆ ನೆನಪಾಗುವುದು ‘ನಾನೂ ಅಮೆರಿಕೆಗೆ ಹೋಗಿದ್ದೆ’ ಕೃತಿ. ಇದು ಕನ್ನಡ ಪ್ರವಾಸ ಸಾಹಿತ್ಯದಲ್ಲಿ ವಿಶಿಷ್ಟ ಕೃತಿಯೆಂದು ಹೆಸರು ಮಾಡಿದೆ. ಈ ಕೀರ್ತಿ, ಸತ್ವಪೂರ್ಣ ಲೇಖಕರೊಬ್ಬರನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಅಗ್ಗಳಿಕೆ ಕಾಮತರ ಪತ್ನಿ ಜ್ಯೋತ್ಸ್ನಾ ಅವರ ಪಾಲಿಗೆ.

ಪ್ರತಿಯಾಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆನ್ನುವ ಮಾತನ್ನು ಇಲ್ಲಿ ಸ್ವಲ್ಪ ಬದಲಿಸಿಕೊಳ್ಳಬಹುದು. ಕೃಷ್ಣಾನಂದ ಕಾಮತ್ ಎನ್ನುವ ಆಲ್‌ರೌಂಡರ್ ಯಶಸ್ಸಿನಲ್ಲಿ ಪತ್ನಿಯ ಪಾತ್ರ ದೊಡ್ಡದು. ಇಷ್ಟಕ್ಕೂ ಕೃಷ್ಣಾನಂದರು ಬರೆಯುವ ಹವ್ಯಾಸವನ್ನು ಹಚ್ಚಿಕೊಂಡದ್ದೇ ಜ್ಯೋತ್ಸ್ನಾ ಅವರ ಒತ್ತಾಸೆಯ ಫಲವಾಗಿ.
ಡಾ. ಕೃಷ್ಣಾನಂದ ಕಾಮತ್ ಮೂಲತಃ ವಿಜ್ಞಾನಿ. ಜ್ಯೋತ್ಸ್ನಾ ಅವರನ್ನು ಮದುವೆಯಾದ ಹೊಸತ(1966) ರಲ್ಲಿ ಅಮೆರಿಕಾಗೆ ಹೋಗಿ ಬಂದ ಕಾಮತ್, ತಮ್ಮ ಅನುಭವಗಳನ್ನು ಎಲ್ಲ ಗಂಡಂದಿರಂತೆ ಪತ್ನಿಗೆ ಬಣ್ಣಿಸಿದರು. ಜ್ಯೋತ್ಸ್ನಾ ಕೇಳಿ ಸುಮ್ಮನಾಗುವ ಹೆಣ್ಣಲ್ಲ . ಕಾಮತರ ಅನುಭವಗಳು ಮನೆಯಾಚೆಯೂ ಪಸರಿಸಬೇಕು ಅನ್ನುವ ಹಂಬಲ ಮೊಳಕೆಯಾಡೆದದ್ದೇ ತಡ, ಅನುಭವಗಳನ್ನು ಬರಹ ರೂಪಕ್ಕಿಳಿಸಲು ಕಾಮತರನ್ನು ಒತ್ತಾಯಿಸತೊಡಗಿದರು. ಫಲವಾಗಿ ರೂಪುತಳೆದದ್ದು ‘ನಾನೂ ಅಮೆರಿಕೆಗೆ ಹೋಗಿದ್ದೆ ’ ಕೃತಿ, 1969 ರಲ್ಲಿ .
ಚಿಕಿತ್ಸಕ ಮನಸ್ಸಿನ ಲೇಖಕ
ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆ ಹೊನ್ನಾವರದಲ್ಲಿ , ಸೆಪ್ಟಂಬರ್ 29, 1934ರಲ್ಲಿ . ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾದೇವಿ. ಕರ್ನಾಟಕ ವಿವಿಯಲ್ಲಿ ಎಂಎಸ್ಸಿ ಪೂರೈಸಿ, ಅಮೆರಿಕಾದ ನ್ಯೂಯಾರ್ಕ್ ಸ್ಟೇಟ್ ವಿವಿಯಿಂದ ಪರಿಸರ ಮತ್ತು ಅರಣ್ಯ ವಿಜ್ಞಾನ ವಿಷಯದಲ್ಲಿ 1965 ರಲ್ಲಿ ಪಿಎಚ್‌ಡಿ ಪದವಿ ಪಡೆದರು.
ಭಾರತಕ್ಕೆ ಮರಳಿದ ನಂತರ ರಾಜಸ್ಥಾನದ ಜಾಬ್ನೇರ ಕೃಷಿ ವಿವಿಯಲ್ಲಿ 3 ವರ್ಷ ಸೇವೆ ಸಲ್ಲಿಸಿದರು. ಅಲ್ಲಿನ ಅನುಭವಗಳು ‘ನಾ ರಾಜಸ್ಥಾನದಲ್ಲಿ ’(1974) ಕೃತಿಯಾಗಿವೆ . ಪಶ್ಚಿಮ ಬಂಗಾಳದ ಇತಿಹಾಸ ಪ್ರಸಿದ್ಧ ‘ಪ್ಲಾಸಿ’ಯಲ್ಲಿ ಕಾಮತ್ ವಾಸವಾಗಿದ್ದರು. ಇಲ್ಲಿನ 2 ವರ್ಷಗಳ ಸೇವೆಯ ಅವಧಿಯಲ್ಲಿ ಕೃಷ್ಣಾನಂದರು ಹೊಂದಿದ ಅನುಭವಗಳ ಮೊತ್ತವೇ ‘ವಂಗದರ್ಶನ’(1972). ಕೃಷ್ಣಾನಂದರ ಚಿಕಿತ್ಸಕ ಮನಸ್ಸಿನ ಪರಿಚಯವಾಗಬೇಕಾದರೆ ‘ವಂಗದರ್ಶನ’ ಓದಬೇಕು. ಬಂಗಾಳದ ರಾಜಕೀಯ, ಸಂಸ್ಕೃತಿ, ಸಾಮಾಜಿಕ ಒಳನೋಟಗಳೆಲ್ಲ ‘ವಂಗದರ್ಶನ’ದಲ್ಲಿ ಒಡಮೂಡಿವೆ. ಅವರು ಬಂಗಾಳಿಯನ್ನೂ ಕಲಿತಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಶಿಷ್ಯವೇತನ ಪಡೆದು 1 ವರ್ಷ ಮಧ್ಯಪ್ರದೇಶದಲ್ಲಿ ಪ್ರವಾಸ ಕೈಗೊಂಡರು. ಅಲ್ಲಿನ ಅನುಭವ ‘ಕಾಲರಂಗ, ಬಸ್ತರ ಪ್ರವಾಸ ಹಾಗೂ ಮಧ್ಯಪ್ರದೇಶದ ಮಡಿಲಲ್ಲಿ ’ ಕೃತಿಗಳಲ್ಲಿ ದಾಖಲಾಗಿವೆ. ಪ್ರೇಯಸಿಗೆ ಪತ್ರಗಳು ಕಾಮತರ ಇನ್ನೊಂದು ಮಹತ್ವದ ಕೃತಿ.
ಕೃಷ್ಣಾನಂದ ಕಾಮತರಿಗೆ ಸಂದ ಗೌರವಗಳು
1994 ರಲ್ಲಿ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ , ಉತ್ತರ ಕನ್ನಡ ಜಿಲ್ಲಾ 9 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವಗಳಿಗೆ ಪಾತ್ರರಾಗಿರುವ ಕೃಷ್ಣಾನಂದರು, ತಮ್ಮ ಮೂರು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
ಕಾಮತರದು ಚುರುಕು ಹಾಗೂ ಅಡಕ ಶೈಲಿ. ನಾನು ಕನ್ನಡ ಸಾಹಿತ್ಯವನ್ನು ಹೆಚ್ಚು ಓದಿಕೊಂಡವನಲ್ಲ ಎಂದು ನಮ್ರವಾಗಿ ಒಪ್ಪಿಕೊಳ್ಳುವ, ಸಾಹಿತ್ಯದ ಬರವಣಿಗೆಯಲ್ಲಿ ವಿಜ್ಞಾನದ ಸಂಕ್ಷಿಪ್ತತೆ ಅಗತ್ಯ ಎನ್ನುವ ಅವರಿಗೆ ಎ.ಎನ್.ಮೂರ್ತಿರಾವ್ ಹಾಗೂ ಬಿ.ಜಿ.ಎಲ್.ಸ್ವಾಮಿ ಅವರ ಬರಹದ ಶೈಲಿ ಅಚ್ಚುಮೆಚ್ಚು . ವೈವಿಧ್ಯತೆಗೆ ಕಾಮತರ ಕೆಲವು ಪುಸ್ತಕಗಳನ್ನು (ಪ್ರವಾಸ ಸಾಹಿತ್ಯದೊಂದಿಗೆ) ನೋಡಿ- ಪ್ರಾಣಿ ಪ್ರಪಂಚ (1975), ಪಶು ಪಕ್ಷಿ ಪ್ರಪಂಚ, ಕೀಟ ಜಗತ್ತು , ಸಸ್ಯ ಪ್ರಪಂಚ, ಸಸ್ಯ ಪರಿಸರ, ಭಗ್ನ ಸ್ವಪ್ನ - ಕಾದಂಬರಿ(1971). ಇಷ್ಟಿದ್ದರೂ, ಕಾಮತರೇಕೆ ಕನ್ನಡ ಸಾರಸ್ವತ ಲೋಕದಲ್ಲಿ ಎದ್ದು ಕಾಣುತ್ತಿಲ್ಲ ? ಅದು ಅರ್ಥವಾಗದ ಮೋಡಿ!
ಮುಖಪುಟ / ಸಾಹಿತ್ಯ ಸೊಗಡು
ರ ಇತರೆ ಸುದ್ದಿ/ಲೇಖನಗಳನ್ನು ಓದಿ