ಯಾರು ಬೇಕಾದರೂ ಆಡಬಹುದಾದ, ಎಲ್ಲರೂ ಒಪ್ಪುವ ಈ ಆಶಯ ಭಾಷಣದ ಸಾರವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ಅಲ್ಲಲ್ಲಿ , ಅಷ್ಟಿಷ್ಟು ನಡೆದಿವೆ, ನಿಜ. ಆದರೆ ಕನ್ನಡವನ್ನು ಕಂಪ್ಯೂಟರ್ ಭಾಷೆಗೆ ತೊಡಿಸುವ ಇಚ್ಛೆಯುಳ್ಳ ಕೆಲವು ವ್ಯಕ್ತಿ-ಸಂಸ್ಥೆಗಳಲ್ಲಿ ಇವತ್ತು ವ್ಯಕ್ತಿ ಪ್ರತಿಷ್ಠೆ ಮತ್ತು ಸಂಕುಚಿತ ಮನೋಭಾವಗಳ ಮೇಲಾಟದಿಂದಾಗಿ ಕನ್ನಡ ತಂತ್ರಾಂಶ ಕುರಿತ ಮುಂದುವರೆದ ಸಂಶೋಧನೆಗಳಿಗೆ ತೊಡಕಾಗಿದೆ. ಅಷ್ಟೇ ಅಲ್ಲ. ಜಿಗುಟಿ ತಮಾಷೆ ನೋಡುವ ಪಟ್ಟಭದ್ರ ಹಿತಾಸಕ್ತಿಗಳ ಹಾವಳಿಯಿಂದಾಗಿ ಕನ್ನಡ ಫಾಂಟ್ ಸಮಾಚಾರ ಬೆಂಕಿಗೆ ಬಿದ್ದಿದೆ!
ಯಾಕೆ ಹೀಗೆ ?
ವಿವಾದಗಳು ಒತ್ತಟ್ಟಿಗಿರಲಿ. ಕನ್ನಡ ತಂತ್ರಾಂಶದ ಪುರೋಭಿವೃದ್ಧಿ ಯ ಬಗ್ಗೆ ನಿರ್ಮಲವಾದ ಆಸಕ್ತಿ ಇಟ್ಟುಕೊಂಡಿರುವ ತಜ್ಞರು, ಪ್ರಾಜ್ಞರು ಮತ್ತು ನಿಮ್ಮಲ್ಲಿ ಒಂದು ನಿವೇದನೆ ; ತಂತ್ರಾಂಶ ಕುರಿತಾದ ನಿಮ್ಮ ಸಂತಸ/ ತಾಪತ್ರಯಗಳನ್ನು ‘ದಟ್ಸ್‌ಕನ್ನಡ ಡಾಟ್‌ಕಾಂ ತಂತ್ರಾಂಶ /ಫಾಂಟ್ ವಿಭಾಗ’ ಕ್ಕೆ ಬರೆದುಕೊಳ್ಳಬಹುದು. ( ಕನ್ನಡದಲ್ಲಿ ಮಾತ್ರ!) ಕನ್ನಡ ಲಿಪಿ ಆವಿಷ್ಕಾರ, ಸುಧಾರಣೆ, ಸಂಶೋಧನೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವವರು ತಮ್ಮ ಅನುಭವಗಳನ್ನು ಈ ಅಂಕಣದ ಮೂಲಕ ಹಂಚಿಕೊಳ್ಳಬಹುದು. ಕನ್ನಡ-ತಂತ್ರಾಂಶ-ಲಿಪಿ ಕುರಿತು ನಡೆದಿರುವ, ನಡೆಯುತ್ತಿರುವ ಎಲ್ಲ ಕೆಲಸಗಳನ್ನು ಅಂತರ್‌ಜಾಲದಲ್ಲಿ ದಾಖಲಿಸುವುದು ಈ ವಿಭಾಗದ ಉದ್ದೇಶ. ಲೇಖನಗಳನ್ನು ಪ್ರಕಟಿಸುವ ಹಕ್ಕು ಸಂಪಾದಕ ಮಂಡಳಿಗೆ ಸೇರಿರುತ್ತದೆ ಹಾಗೂ ಪ್ರಕಟಿತ ಲೇಖನಗಳಲ್ಲಿನ ಅಭಿಪ್ರಾಯಗಳು ಆಯಾ ಲೇಖಕರಿಗೆ ಸೇರಿರುತ್ತದೆ.
- ಸಂಪಾದಕ |