clear
clear
clear
clear
ಮುಖಪುಟ » ಸಾಹಿತ್ಯ-ಸಂಸ್ಕೃತಿ » ಲೇಖನ-ಸಂದರ್ಶನ » ಪೂರ್ಣಪಾಠ
ಆಚರಣೆಗಳಿಗೆ ಕಿಂಚಿತ್ತೂ ಬರವಿಲ್ಲ. ಆದ್ರೆ ಅರ್ಥಗೊತ್ತೇ?
[IST]
The desire and the interest to KNOW
ಊದು ಬತ್ತಿಯೋ, ಹೂಬತ್ತಿಯೋ, ಕರ್ಪೂರವೋ..ಯಾವೊಂದು ದೀಪದರ್ಶನವಿಲ್ಲದೆ, ಉತ್ತರ ಮಂಗಳ ನೀರಾಜನ ದೀಪಂ ! ಎನದೆ ನಮ್ಮ  ಯಾವುದೇ ಪೂಜೆ ಪುನಸ್ಕಾರಗಳು ಪೂರ್ತಿಯಾಗುವುದಿಲ್ಲ. ಇಂಥ ಅನೇಕ ವಿಧಿ, ಆಚರಣೆಗಳ ಹಿನ್ನೆಲೆಯನ್ನು ತಿಳಿಯುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ.


ವಿಕಾಸ್ ಹೆಗಡೆ, ಬೆಂಗಳೂರು.

ಎಲ್ಲರಿಗೂ ಗೊತ್ತಿರುವಂತೆ ನಮ್ಮಲ್ಲಿ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಬಹಳ. ದೇವರ ವಿಷಯದಲ್ಲೇ ತೆಗೆದುಕೊಂಡರೆ ಹಣ್ಣು ಕಾಯಿ ಇಂದ ಹಿಡಿದು ನರಬಲಿ ಕೊಡುವ ಮಟ್ಟದವರೆಗೂ ದೇವರನ್ನು ಸಂಪ್ರೀತಿಗೊಳಿಸುವ ಹಲವಾರು ನಂಬಿಕೆಗಳಿವೆ. ಸಾಮಾನ್ಯ ಸತ್ಯನಾರಾಯಣ ಪೂಜೆಯಂತ ಆಚರಣೆಗಳು ಒಂದೆಡೆಯಾದರೆ ದೇವರಿಗೆ ಮುಡಿಪಿಟ್ಟ ಬಲಿಯೊಂದು ಸತ್ತು ಬದುಕಿ ಬರುವ 'ಹೀಗೂ ಉಂಟೆ' ಎನಿಸುವ ವಿಚಿತ್ರಗಳು ಇನ್ನೊಂದೆಡೆ. ಆದರೆ ಇಂತಹ ಈ ಆಚರಣೆಗಳು, ಸಂಪ್ರದಾಯಗಳು ಎಲ್ಲ ಹೇಗೆ ರೂಢಿಯಾಯಿತು ಎಂದು ಹುಡುಕಲು ಹೊರಟರೆ ಕೆಲವೊಂದಕ್ಕೆ ಯಾವುದೇ ಕಾರಣವಾಗಲಿ, ಹಿನ್ನೆಲೆಯಾಗಲಿ ತಿಳಿಯುವುದೇ ಕಷ್ಟ. ಕೆಲವಕ್ಕೆ ಕಾರಣ, ಹಿನ್ನೆಲೆ ಗೊತ್ತಾದರೂ ಸಹ ಅದರ ಅರ್ಥ, ಅವಶ್ಯಕತೆ, ಪ್ರಸ್ತುತತೆ ಗೊತ್ತಾಗುವುದಿಲ್ಲ.

ಇದಕ್ಕೆ ಕಾರಣ ತಲೆಮಾರುಗಳ ನಡುವಿನ ಕಮ್ಯುನಿಕೇಶನ್ ಗ್ಯಾಪ್ ಇರಬಹುದು ಎನಿಸುತ್ತದೆ. ಎಷ್ಟೋ ಜನಕ್ಕೆ ತಾವು ಯಾಕೆ ಮಾಡುತ್ತಿದ್ದೇವೆ ಎಂದೇ ತಿಳಿದಿರುವುದಿಲ್ಲ. ಕೆಲವರಿಗೆ ಗೊತ್ತಿದ್ದರೂ ಹೇಳುವುದಿಲ್ಲ. ಇನ್ನೂ ಹಲವಾರು ಆಚರಣೆ, ವಿಧಿವಿಧಾನಗಳು ಕೇವಲ ರೂಢಿಯಿಂದಲೂ ಬಂದದ್ದುಂಟು. ಅಜ್ಜ ಮಾಡುತ್ತಿದ್ದ, ಅಪ್ಪ ಮಾಡುತ್ತಿದ್ದ ಅದಕ್ಕೆ ತಾನೂ ಮಾಡಬೇಕು ಎನ್ನುವವರೇ ಹೆಚ್ಚು.

ನಾನು ಶಾಲೆಯಲ್ಲಿದ್ದಾಗ ಶಿಕ್ಷಕರೊಬ್ಬರು ನಮ್ಮ ಸುಮಾರಷ್ಟು ಆಚರಣೆಗಳು ಹೇಗೆ ರೂಢಿಗೆ ಬಂದವು ಎನ್ನುವುದಕ್ಕೆ ಉದಾಹರಣೆಯಾಗಿ ಒಂದು ಕಥೆಯನ್ನು ಹೇಳುತ್ತಿದ್ದರು.

ಒಂದೂರಿನಲ್ಲಿ ಒಬ್ಬ ಮನುಷ್ಯನಿದ್ದ, ಅವನಿಗೆ ದಿನವೂ ದೇವರ ಪೂಜೆ ಮಾಡುವ ಅಭ್ಯಾಸ. ಅವರ ಮನೆಯಲ್ಲಿ ಬೆಕ್ಕೊಂದಿತ್ತು. ಅದು ಮನೆಯೊಳಗೆಲ್ಲ ತಿರುಗಾಡಿಕೊಂಡು ಹಾಯಾಗಿತ್ತು. ಆದರೆ ಪೂಜೆಯ ಸಮಯದಲ್ಲಿ ದೇವರ ಮನೆಗೂ ಬಂದು ಮೈ ತಾಗಿಸುವುದು, ಪೂಜಾ ಸಾಮಗ್ರಿಗಳನ್ನು ಮೂಸುವುದು, ನೆಕ್ಕುವುದು ಮಾಡುತಿತ್ತು. ದಿನವೂ ಎಷ್ಟು ಪ್ರಯತ್ನ ಪಟ್ಟರೂ ಅದರ ಕಾಟ ತಪ್ಪಿಸಲಾಗದೆ ಕೊನೆಗೆ ಆ ಮನುಷ್ಯ ದಿನವೂ ಪೂಜೆಯ ಸಮಯ ಬಂದಾಗ ಆ ಬೆಕ್ಕನ್ನು ಹಿಡಿದು ಒಂದು ಬುಟ್ಟಿಯಲ್ಲಿ ಮುಚ್ಚಿ ಅದರ ಮೇಲೆ ದಪ್ಪದೊಂದು ಕಲ್ಲನ್ನು ಹೇರಿ ಬೆಕ್ಕು ಹೊರಬರದಂತೆ ಮಾಡಿ ಪೂಜೆಗೆ ಕೂರುತ್ತಿದ್ದ. ಇದರಿಂದ ಪೂಜೆ ಮುಗಿಯುವ ವರೆಗೂ ಬೆಕ್ಕಿನ ಕಾಟ ತಪ್ಪುತ್ತಿತ್ತು. ಪೂಜೆ ಮುಗಿದ ನಂತರ ಬೆಕ್ಕನ್ನು ಹೊರಬಿಡುತ್ತಿದ್ದ.

ಆ ಮನುಷ್ಯನ ಮಗನೊಬ್ಬನಿದ್ದ. ಅಪ್ಪನ ಮರಣದಿಂದ ಪೂಜೆಯ ಹೊಣೆ ಅವನ ಮೇಲೆ ಬಿತ್ತು. ತನ್ನ ಅಪ್ಪ ಪೂಜೆಯ ಸಮಯದಲ್ಲಿ ಬೆಕ್ಕನ್ನು ಬುಟ್ಟಿಯಲ್ಲಿ ಮುಚ್ಚಿಡುವುದನ್ನು ಸಣ್ಣವನಿದ್ದಾಗಲಿಂದ ನೋಡಿದ್ದ ಅವನು ಅದೂ ಕೂಡ ಪೂಜೆಯ ಜೊತೆಗೆ ಮಾಡುವ ವಿಧಾನವೆಂದೇ ತಿಳಿದಿದ್ದ. ಅವನು ಅಪ್ಪನನ್ನು ಅದಕ್ಕೆ ಕಾರಣವನ್ನು ಕೇಳಿರಲಿಲ್ಲ, ಅಪ್ಪ ಹೇಳಿರಲೂ ಇಲ್ಲ. ಅದರಂತೆ ಅವನೂ ಕೂಡ ಅದೇ ರೀತಿ ಬೆಕ್ಕನ್ನು ಹಿಡಿದು ಬುಟ್ಟಿಯಲ್ಲಿ ಮುಚ್ಚಿಟ್ಟು ಪೂಜೆ ಕೆಲಸ ಮಾಡುತ್ತಿದ್ದ. ಸ್ವಲ್ಪ ದಿನಗಳ ನಂತರ ಆ ಬೆಕ್ಕೂ ಸತ್ತು ಹೋಗಿದ್ದರಿಂದ ಇವನು ಆ ಪದ್ಧತಿಯನ್ನು ಬಿಡಬಾರದೆಂಬ ಉದ್ದೇಶದಿಂದ ಬೇರೆ ಬೆಕ್ಕೊಂದನ್ನು ತಂದು ಸಾಕಿ ಪೂಜೆ ಮಾಡುವ ಸಮಯಕ್ಕೆ ಬುಟ್ಟಿಯಲ್ಲಿ ಮುಚ್ಚಿಟ್ಟು ಅಪ್ಪನ ಸಂಪ್ರದಾಯವನ್ನು ಪಾಲಿಸುತ್ತಿದ್ದ. ಇದು ಹೀಗೆ ಮುಂದುವರೆಯಿತು.

ನಂತರ ಮೊಮ್ಮಗನ ಸರದಿ ಬಂದಾಗ ಅವನಿಗೂ ಕೂಡ ಪೂಜೆ ಸಮಯದಲ್ಲಿ ಬೆಕ್ಕನ್ನು ಮುಚ್ಚಿಡುವ ಅವನ ಅಪ್ಪನ ಸಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕೆಂಬ ಆಸೆಯಿದ್ದರೂ ಸಹ ಆ ಸಮಯದಲ್ಲಿ ಅವನಿಗೆ ಬೆಕ್ಕುಗಳ್ಯಾವೂ ಸಿಗಲಿಲ್ಲ. ಕೊನೆಗೆ ಯಾರ ಹತ್ತಿರವೋ ಹೀಗೀಗೆ ತನ್ನ ಮನೆಯ ಸಂಪ್ರದಾಯವಿತ್ತು ಎಂದಾಗ, ಯಾವುದೇ ಕಾರಣಕ್ಕೂ ಆ ಸಂಪ್ರದಾಯ ನಿಲ್ಲಬಾರದು, ಜೀವಂತ ಬೆಕ್ಕು ಇಲ್ಲದಿದ್ದರೂ ಪರವಾಗಿಲ್ಲ ಒಂದು ಬೆಕ್ಕಿನ ಬೊಂಬೆಯನ್ನಾದರೂ ಮಾಡಿ ಬುಟ್ಟಿಯಲ್ಲಿ ಮುಚ್ಚಿಡುವ ವಿಧಾನ ಸರಿಯೆಂಬ ಉಚಿತ ಸಲಹೆ ದೊರೆಯಿತು. ಅದರಂತೆ ಅವನು ಬೆಕ್ಕಿನ ಬೊಂಬೆ ತಂದು ಪೂಜೆ ವಿಧಾನ ಮುಂದುವರೆಸಿದ......

ಈ ಕಥೆಯೂ ನಿಜವಾಗಿರಬೇಕೆನಿಲ್ಲ, ಆದರೆ ಅದರ ಒಟ್ಟು ಸಾರಾಂಶ ಮತ್ತು ಅದರ ಹಿಂದೆ ಅರ್ಥವಿರುವುದೂ ಸ್ಪಷ್ಟವಾಗಿದೆ.

ಹಾಗಂತ ನಮ್ಮ ಎಲ್ಲ ಆಚರಣೆಗಳೂ ಮೂಢವಾದದ್ದು ಅಂತೇನು ಇಲ್ಲ. ನಮ್ಮ ಸುಮಾರು ಆಚರಣೆಗಳು ಕಾಲಕ್ಕನುಗುಣವಾಗಿ ವೈಜ್ಞಾನಿಕ, ನೈತಿಕ, ಸಾಮಾಜಿಕ ಪ್ರಜ್ಞೆಯ ಆಧಾರವನ್ನು ಹೊಂದಿವೆ. ಆದರಲ್ಲಿ ಕೆಲವು ಆನಂತರ ಅತಿರಂಜಿತವಾಗಿರುವುದೂ, ಉತ್ಪ್ರೇಕ್ಷೆಗೊಳಗಾಗಿರುವುದೂ ಹೌದು. ಇವುಗಳ ಮಧ್ಯದಲ್ಲೇ ಅನೇಕ ಮೂಢನಂಬಿಕೆಗಳೂ ಬೇರೂರಿ ವೈಯಕ್ತಿಕವಾಗಿ ಮತ್ತು ಸಮಾಜಕ್ಕೆ ಪೀಡೆಗಳಾಗಿ ಉಳಿದಿರುವುದನ್ನು ಕಾಣಬಹುದು. ಇದೆಲ್ಲ ಏನೇ ಇದ್ದರೂ, ಇಂದು ಎಲ್ಲ ಸಂಪ್ರದಾಯಗಳನ್ನು, ಆಚರಣೆಗಳನ್ನು, ವಿಧಿವಿಧಾನಗಳನ್ನು, ನಿಯಮಗಳನ್ನು ಕೇವಲವಾಗಿ ನೋಡುವ, ಸಾರಾಸಗಟಾಗಿ ತಳ್ಳಿಹಾಕಿ, ಹೀಗಳೆದು, ತನಗೆ ನಂಬಿಕೆ ಇಲ್ಲ ಎಂದು negative ವಿಚಾರವಾದಿಯಂತೆ ವರ್ತಿಸುವ ಬದಲು ಸ್ವಲ್ಪ ಗೌರವ ದೃಷ್ಟಿಯಿಂದ, ಕಾಲಕ್ಕನುಗುಣವಾಗಿ, ಬೇರೆಯವರ ಭಾವನೆಗಳಿಗೆ ಧಕ್ಕೆ ಬರದಂತೆ ವೈಜ್ಞಾನಿಕತೆಯನ್ನಿಟ್ಟುಕೊಂಡೇ ವಿಮರ್ಶೆ ಮಾಡುವ ಬುದ್ಧಿ ಬೆಳೆಸಿಕೊಂಡರೆ ಒಳ್ಳೆಯದು. ಅಷ್ಟಕ್ಕೂ ಜಗತ್ತಿನಲ್ಲಿ ಎಲ್ಲವೂ ವಿಜ್ಞಾನವೇ ಯಾಕಾಗಿರಬೇಕು?!! ಕಲೆಗೆ, ಭಾವನೆಗಳಿಗೆ, ನಂಬಿಕೆಗೆ, ರೂಢಿಗಳಿಗೆ, ಬೆಲೆಯೇ ಇರಬಾರದೇಕೆ?

ಕಣ್ಣಿಗೇ ಕಾಣದ ಎಲೆಕ್ಟ್ರಾನ್, ಪ್ರೋಟಾನ್ ಗಳ ಬಗ್ಗೆ ಗ್ರಂಥಗಳನ್ನೇ ಓದಿ ತಿಳಿದುಕೊಳ್ಳುವ, ಎಷ್ಟೋ ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರವಿರುವ ನಕ್ಷತ್ರವೊಂದರ ಬಗ್ಗೆ ಕುತೂಹಲ ತಳೆಯುವ, ಸಂಬಂಧವಿಲ್ಲದ ದೂರ ದೇಶದ ರಾಜಕೀಯದ ಬಗ್ಗೆ ವಿಶ್ಲೇಷಿಸುವ, ಅದ್ಯಾವುದೋ ಐಟಂ ಗರ್ಲ್ ಒಬ್ಬಳಿಗೆ ಯಾವನೋ ಮುತ್ತು ಕೊಟ್ಟರೆ ಅದರ ಬಗ್ಗೆ ಗಂಟೆಗಟ್ಟಲೆ ಚರ್ಚಿಸುವ ನಾವು ದಿನಾ ನೋಡುವ ದೇವರಿಗೆ ಮಂಗಳಾರತಿ ಮಾಡುವ ಅಭ್ಯಾಸ ಯಾಕೆ, ಹೇಗೆ ಬಂತು, ಮನೆಯ ಬಾಗಿಲಿನ ತೋರಣಕ್ಕೆ ಮಾವಿನ ಎಲೆಯನ್ನೇ ಯಾಕೆ ಕಟ್ಟುತ್ತಾರೆ ಎಂಬಂತಹ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಒಂದು ಚಿಕ್ಕ ಪ್ರಯತ್ನವನ್ನು ಕೂಡ ಮಾಡುವುದಿಲ್ಲವೆನ್ನುವುದೇ ಆಶ್ಚರ್ಯ ಹಾಗೂ ವಿಪರ್ಯಾಸ. ಅಷ್ಟಕ್ಕೂ ಇವೆಲ್ಲಾ 'ತಿಳಿದುಕೊಂಡು ಏನಾಗಬೇಕಿದೆ?' ಅನ್ನಿಸುತ್ತದೇನೋ ಅಥವಾ ತಿಳಿಯಲು ಸಮಯ, ವ್ಯವಧಾನವಿಲ್ಲವೇನೋ!
ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: Shridhar
ದಿನಾಂಕ: 29 Feb 2008 1:28 pm
I had a look at The above given article in Google .. very informatove article .. now i can discuss this things with like minded people who are interested in follwoing the rituals .. Thanks to Bhalle as well as Vikas Hegde ..

ಇಂದ: ವಿಕಾಸ್ ಹೆಗಡೆ
ದಿನಾಂಕ: 26 Feb 2008 4:36 pm
ಸುನಿಲ್, ಅಲ್ಲಿ ನಾನು ನಮ್ಮ ಆಚರಣೆಗಳ ಬಗ್ಗೆ ನಾವು ಸ್ವ ಆಸಕ್ತಿಯಿಂದ ತಿಳಿದುಕೊಳ್ಳೊ ಪ್ರಯತ್ನ ಮಾಡ್ಬೇಕು ಅಂತ ಹೇಳೋಕೆ ಹೊರಟಿದ್ದೇ ಹೊರತು ಆಚರಣೆಗಳ ಅರ್ಥಗಳನ್ನೆಲ್ಲ ಹೇಳುವ ಉದ್ದೇಶವಿರಲಿಲ್ಲ. ಮಂಗಳಾರತಿ, ತೋರಣಗಳನ್ನು ಸುಮ್ನೆ ಉದಾಹರಣೆಯಾಗಿ ತಗೊಂಡಿದ್ದಷ್ಟೆ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು