ಆತ್ಮೀಯರೇ, ನಮಸ್ಕಾರ!
ವಿಚಿತ್ರಾನ್ನ ಅಂಕಣಕ್ಕೆ ಏಕಾಏಕಿಯಾಗಿ(ಅಂದರೆ ಹೇಳದೆಕೇಳದೆ!) 'ಶುಭಂ" ತೆರೆಬಿದ್ದದ್ದು ನೋಡಿ ಸಖೇದಾಶ್ಚರ್ಯದಿಂದ, ತುಸು ಬೇಜಾರಿನಿಂದ, ಯಾಕೆ ನಿಲ್ಲಿಸಿದ್ರಿ? ಬರೆಯುವುದನ್ನು ನಿಲ್ಲಿಸಬೇಡಿ; ಬೇರೊಂದು ರೂಪದಲ್ಲಾರೂ ಮುಂದುವರಿಸಿ.. ಎಂಬ ಸ್ನೇಹಪೂರ್ವಕ ಬೇಡಿಕೆಯಿಂದ ನೀವು ಬರೆದ ಇಮೈಲ್/ಯಾಹೂಆಫ್ ಲೈನ್ ಮೆಸೇಜ್/ಆರ್ಕುಟ್‌ಸ್ಕ್ರಾಪ್ ನನ್ನನ್ನು ಮೂಕವಿಸ್ಮಿತನಾಗಿಸಿದೆ.
ಐದು ವರ್ಷಗಳ ಕಾಲ ಅಚ್ಚುಕಟ್ಟಾಗಿ(ಎಂದು ನನ್ನ ಭಾವನೆ :-) ವಿಚಿತ್ರಾನ್ನ ಅಂಕಣವನ್ನು ನಿರ್ವಹಿಸಿದೆ. ಎಲ್ಲ ಚೆನ್ನಾಗಿರುವಾಗ ವಿದಾಯ ಹೇಳಿ Graceful Exit ಪಡೆಯೋದು ಜಾಣತನ ಎಂಬ ಕಾರಣಕ್ಕೆ, ಸಂಪಾದಕ ಎಸ್.ಕೆ.ಶಾಮಸುಂದರ ಅವರೊಂದಿಗೆ ಸಮಾಲೋಚಿಸಿ ಈ ನಿರ್ಣಯ ಕೈಗೊಂಡೆ.
ಮಂಗಳವಾರದ ಸಾಪ್ತಾಹಿಕ ಅಂಕಣಕ್ಕೆ ನಾನು ಮಂಗಳ ಹಾಡಿದ್ದೇ ವಿನಃ ಇನ್ನು ಮುಂದೆ ಬರೆಯುವುದೇ ಇಲ್ಲ ಅಂತ ಭೀಷ್ಮಪ್ರತಿಜ್ಞೆ ಏನೂ ಮಾಡಿದ್ದಲ್ಲ. ಖಂಡಿತವಾಗಿಯೂ ಆಗೊಮ್ಮೆ ಈಗೊಮ್ಮೆ SJ ಛಾಪಿನ ಬರಹಗಳನ್ನು ದಟ್ಸ್‌ಕನ್ನಡಕ್ಕೆ ಕಳಿಸುತ್ತಿರುತ್ತೇನೆ. ಪ್ರೀತಿ, ವಿಶ್ವಾಸ ಮತ್ತು ಕಳಕಳಿಯಿಂದ ಕೂಡಿದ ನಿಮ್ಮ ಮಾತುಗಳಿಗಾಗಿ ಮತ್ತೊಮ್ಮೆ ನಿಮಗೆ ದಟ್ಸ್ ಕನ್ನಡ ಪುಟಗಳ ಮೂಲಕ ಧನ್ಯವಾದ ಸಲ್ಲಿಸುತ್ತಿದ್ದೇನೆ.
ನಿಮ್ಮ ಇಮೈಲ್ ಐಡಿ ಮತ್ತು ಈ ಐದು ವರ್ಷಗಳಲ್ಲಿ ನೀವು ನನಗೆ ಬರೆದಿರುವ ಇಮೈಲ್ ಎಲ್ಲ ನನ್ನ ಕಂಪ್ಯೂಟರ್‌ನ ವಿಚಿತ್ರಾನ್ನ ಫೋಲ್ಡರ್‌ನಲ್ಲಿ (ಮತ್ತು ಸಾಧ್ಯವಾದ ಮಟ್ಟಿಗೆ ಮನದಾಳದಲ್ಲಿ) ಬೆಚ್ಚಗೆ ಸಂಗ್ರಹವಾಗಿರುತ್ತವೆ. ನಿಮ್ಮೊಡನೆ ಸಂಪರ್ಕದಲ್ಲಿರುತ್ತೇನೆ, ನಿಮ್ಮಿಂದಲೂ ಪತ್ರ ಬರುತ್ತಿದ್ದರೆ ಸಂತಸಪಡುತ್ತೇನೆ, ತಪ್ಪದೆ ಉತ್ತರಬರೆಯುತ್ತೇನೆ. ವಿಚಿತ್ರಾನ್ನ ನಿರ್ಮಿಸಿದ ಸ್ನೇಹಸೇತು ಚಿರಕಾಲವಿರಲೆಂದು ಹಾರೈಸುತ್ತೇನೆ.
ನಿಮಗೂ ನಿಮ್ಮ ಮನೆಯವರೆಲ್ಲರಿಗೂ ತಡವಾಗಿ ನವರಾತ್ರಿ ಮತ್ತು ಮುಂಬರುವ ದೀಪಾವಳಿ ಹಬ್ಬಗಳು ಸುಖಸಂತೋಷದಾಯಕವಾಗಲಿ ಎಂದು ಹಾರೈಸುತ್ತ ಈ ಪತ್ರವನ್ನು ಮುಗಿಸುತ್ತಿದ್ದೇನೆ!
ಇತಿ
ಶ್ರೀವತ್ಸ ಜೋಶಿ ವಾಷಿಂಗ್ಟನ್ ಡಿಸಿ.