clear
clear
clear
clear
ಮುಖಪುಟ » ಅಂಕಣಗಳು » ಬೆತ್ತಲೆ ಜಗತ್ತು » ಪೂರ್ಣಪಾಠ
ಬೆಳ್ಳನೆಯ ನಿಲುವಂಗಿಯ ತುಂಬ ಮತಾಂತರದ ಮಸಿ
Vatican head Pope Benedict XVIಸಂವಿಧಾನದ 25ನೇ ವಿಧಿ ನೀಡಿರುವ ಹಕ್ಕನ್ನು ಉಪಯೋಗಿಸಿಕೊಂಡು ಮಿಷನರಿಗಳು ಮತಾಂತರ ಮಾಡಬಹುದಾದರೆ, ಮತಾಂತರಗೊಂಡವರಿಗೆ ಬುದ್ಧಿ ಹೇಳಿ, ಮನವೊಲಿಸಿ ಮಾತೃಧರ್ಮಕ್ಕೆ ಕರೆತರುವ ಹಕ್ಕು ಹಿಂದೂಗಳಿಗೂ ಇದೆಯಲ್ಲವೆ? ಮೊದಲು ಕ್ಯಾತೆ ತೆಗೆದ ಮಿಷನರಿಗಳು, ಪ್ರತಿದಾಳಿ ನಡೆದ ಕೂಡಲೇ ತಾವು 'victims" ಎಂಬಂತೆ ಪೋಸು ಕೊಡುತ್ತಿದ್ದಾರೆ!

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ಚರ್ಚ್‌ಗಳ ಮೇಲೆ ದಾಳಿ!

ಕ್ರೈಸ್ತರಿಗೆ ಅತ್ಯಂತ ಮಹತ್ವದ ಹಬ್ಬವಾದ ಕ್ರಿಸ್‌ಮಸ್ ದಿನದಂದೇ 12 ಚರ್ಚ್‌ಗಳ ಧ್ವಂಸ, 8 ಜನರಿಗೆ ಗಾಯ. ಮತ್ತೆ ಭುಗಿಲೆದ್ದ ಹಿಂಸಾಚಾರ, ಮತ್ತೆ ಚರ್ಚ್‌ಗಳ ಮೇಲೆ ಆಕ್ರಮಣ. ಒಟ್ಟು 50ಕ್ಕೂ ಹೆಚ್ಚು ಚರ್ಚ್‌ಗಳ ನಾಶ; ಐವರು ಕ್ರೈಸ್ತರ ಹತ್ಯೆ, ಕರ್ಫ್ಯೂ ಜಾರಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಆಗಮನ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರದಿದ್ದರೆ ಕೇಂದ್ರದ ಹಸ್ತಕ್ಷೇಪ, ಕೇಂದ್ರದಿಂದ ನಿಯೋಗ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಪ್ರಕಾಶ್ ಜೈಸ್ವಾಲ್ ಘೋಷಣೆ!

ಡಿಸೆಂಬರ್ 25ರಿಂದ ಇವತ್ತಿನವರೆಗೂ ಇಂತಹ ಎಷ್ಟೋ ಶೀರ್ಷಿಕೆಗಳನ್ನು, ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನೀವು ಖಂಡಿತ ಓದಿರುತ್ತೀರಿ. ಅಷ್ಟಕ್ಕೂ, ಒರಿಸ್ಸಾದಲ್ಲಿ ನಡೆದ ಚರ್ಚ್‌ಗಳ ಮೇಲಿನ ದಾಳಿಯನ್ನು ನಮ್ಮ ಮಾಧ್ಯಮಗಳು ರಾಷ್ಟ್ರೀಯ ದುರಂತವೆಂಬಂತೆ ವರ್ಣಿಸುತ್ತಲೇ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರನ್ನು ಖಳರೆಂಬಂತೆ ಚಿತ್ರಿಸುತ್ತಲೇ ಇವೆ.

ಆದರೆ ಕ್ಯಾತೆ ತೆಗೆದಿದ್ದು ಯಾರು? ಕಿಯೋಂಜರ್ ಹಾಗೂ ಕಂದಮಲ್ ಜಿಲ್ಲೆಗಳು ಇರುವುದು ಒರಿಸ್ಸಾದಲ್ಲಿ. ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೈನ್ಸ್ ಹಾಗೂ ಅವರ ಇಬ್ಬರು ಪುತ್ರರನ್ನು ಸಜೀವವಾಗಿ ದಹನಗೊಳಿಸುವುದರೊಂದಿಗೆ 1999ರಲ್ಲಿಯೇ ಕಿಯೋಂಜರ್ ಜಿಲ್ಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಮೊನ್ನೆಯಷ್ಟೇ ನಡೆದ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಚರ್ಚ್‌ಗಳನ್ನು ನಾಶಪಡಿಸುವುದರೊಂದಿಗೆ ಕಂದಮಲ್ ಜಿಲ್ಲೆ ಈಗ ಸುದ್ದಿಗೆ ಗ್ರಾಸವಾಗಿದೆ. ಇವೆರಡೂ ಒರಿಸ್ಸಾದಲ್ಲಿಯೇ ಅತ್ಯಂತ ಬಡ ಜಿಲ್ಲೆಗಳು. ಕಿಯೋಂಜರ್ ಜಿಲ್ಲೆಯಲ್ಲಿ ಒಟ್ಟು 15.61 ಲಕ್ಷ ಜನರಿದ್ದು ಅವರಲ್ಲಿ ಶೇ. 44.5ರಷ್ಟು ಬುಡಕಟ್ಟು ಜನಾಂಗದವರು. 11.62 ಪರ್ಸೆಂಟ್ ದಲಿತರಿದ್ದಾರೆ. ಇತ್ತ 6.48 ಲಕ್ಷ ಜನಸಂಖ್ಯೆ ಹೊಂದಿರುವ ಕಂದಮಲ್ ಜಿಲ್ಲೆಯಲ್ಲಿ 2.35 ಲಕ್ಷ(ಶೇ.51.96) ಬುಡಕಟ್ಟು ಜನಾಂಗ ದವರು, 1.05 ಲಕ್ಷ (ಶೇ.16.86) ದಲಿತರಿದ್ದಾರೆ. ಹಾಗಾಗಿ ಕ್ರೈಸ್ತ ಮಿಷನರಿಗಳು ಸಹಜವಾಗಿಯೇ ಈ ಜಿಲ್ಲೆಗಳ ಮೇಲೆ ಕಣ್ಣಿಟ್ಟಿದ್ದು, ಮತಾಂತರ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ನವೀನ್ ಪಟ್ನಾಯಕ್ ನೇತೃತ್ವದ 'ಬಿಜು ಜನತಾದಳ" ಸರಕಾರ ಆಮಿಷ, ಒತ್ತಡ ಹಾಗೂ ಬಲವಂತವಾಗಿ ನಡೆಯುವ ಮತಾಂತರವನ್ನು ತಡೆಯುವ ಸಲುವಾಗಿ “ಒರಿಸ್ಸಾ ಫ್ರೀಡಂ ಆಫ್ ರಿಲಿಜನ್ ಆಕ್ಟ್"(OFRA) ಅನ್ನು ಜಾರಿಗೆ ತಂದಿದೆ. ಈ ಕಾಯಿದೆಯ ಪ್ರಕಾರ ಒಬ್ಬ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಬೇಕಾದರೆ ಆತ ಯಾವುದೇ ಒತ್ತಡ, ಆಮಿಷಕ್ಕೆ ಬಲಿಯಾಗಿ ಮತಾಂತರಗೊಳ್ಳುತ್ತಿಲ್ಲ ಎಂಬುದನ್ನು ಜಿಲ್ಲಾ ಆಡಳಿತ ದೃಢಪಡಿಸಬೇಕು. ಆಗ ಮಾತ್ರ ಆತನ ಮತಾಂತರ ಕಾನೂನುಬದ್ಧವಾಗುತ್ತದೆ. ಇಷ್ಟಾಗಿಯೂ, ಕಾಯಿದೆಯನ್ನೇ ಗಾಳಿಗೆ ತೂರಿರುವ ಕ್ರೈಸ್ತ ಮಿಷನರಿಗಳು ಯಾವ ಅಡ್ಡಿ-ಆತಂಕಗಳಿಲ್ಲದ ಮತಾಂತರ ಕಾರ್ಯವನ್ನು ಮುಂದುವರಿಸುತ್ತಲೇ ಇದ್ದಾರೆ. ಇನ್ನೊಂದೆಡೆ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಎಂಬ 80 ವರ್ಷದ ಸಾಧುವೊಬ್ಬರು ಮತಾಂತರಗೊಂಡವರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಕಾರ್ಯವನ್ನು ಮಾಡುತ್ತಿದ್ದಾರೆ.

ಹಾಗಾಗಿ ಯೇಸುವಿನ ಪವಾಡದ ಬಗ್ಗೆ ರಂಗುರಂಗಾದ ಕಥೆ ಹೇಳಿ, ಹಣಕಾಸು ಸಹಾಯದಂತಹ ಆಮಿಷಗಳನ್ನೊಡ್ಡಿ ಮತಾಂತರ ಮಾಡುತ್ತಿರುವ ಮಿಷನರಿಗಳಿಗೆ ಸ್ವಾಮಿ ಲಕ್ಷ್ಮಣಾನಂದರ ಬಗ್ಗೆ ಸಹಜವಾಗಿಯೇ ಕೋಪ ನೆತ್ತಿಗೇರಿದೆ. ಡಿಸೆಂಬರ್ 24ರಂದು ತಮ್ಮ ಸಂಗಡಿಗರೊಂದಿಗೆ ಕಂದಮಲ್ ಜಿಲ್ಲೆಯ ಬ್ರಾಹ್ಮಣಿಗಾವ್ ಎಂಬ ಸ್ಥಳಕ್ಕೆ ತೆರಳುತ್ತಿದ್ದ ಲಕ್ಷ್ಮಣಾನಂದರ ವಾಹನದ ಮೇಲೆ ದಾಳಿ ಮಾಡಿದ ಕ್ರೈಸ್ತರು, ಸ್ವಾಮೀಜಿಯನ್ನು ರಕ್ಷಿಸಲು ಮುಂದಾದ ಯುವಕನೊಬ್ಬನನ್ನು ಕೊಲೆಗೈದು ಪರಾರಿಯಾದರು! ಈ ಘಟನೆಯ ಸುದ್ದಿ ಹರಡಿದ ಕೂಡಲೇ ರೊಚ್ಚಿಗೆದ್ದ ಹಿಂದೂಗಳು ಡಿಸೆಂಬರ್ 25ರಂದು ಚರ್ಚ್‌ಗಳ ಮೇಲೆ ದಾಳಿ ಮಾಡಿದರು. ಪ್ರಾರಂಭದಲ್ಲಿ 12 ಚರ್ಚ್‌ಗಳ ಮೇಲೆ ದಾಳಿ ಮಾಡಿದ್ದೇನೋ ನಿಜ. ಆದರೆ ಕ್ರೈಸ್ತರೂ ಕೂಡ ಪ್ರತಿ ದಾಳಿ ಮಾಡಿ ಹಿಂದೂ ದೇವಾಲಯಗಳನ್ನು ನಾಶ ಪಡಿಸಿದರು. ಹಿಂದೂಗಳ ಮನೆಗಳ ಮೇಲೂ ದಾಳಿ ನಡೆಯಿತು. ಹಾಗಾಗಿ ಮರು ದಾಳಿ ಆರಂಭಿಸಿದ ಹಿಂದೂಗಳು ಎಲ್ಲೆಂದರಲ್ಲಿ ತಲೆಯೆತ್ತಿರುವ 50 ಚರ್ಚ್‌ಗಳನ್ನು ಧ್ವಂಸ ಮಾಡಿದ್ದಾರೆ. ಆದರೆ ತಪ್ಪು ಯಾರದ್ದು?

ಅಷ್ಟಕ್ಕೂ, ಸಮಸ್ಯೆ ಆರಂಭವಾಗಿದ್ದು ಕ್ರೈಸ್ತರಿಂದಲೇ ಅಲ್ಲವೆ? 'ಸಂವಿಧಾನದ 25ನೇ ವಿಧಿ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿವುದಕ್ಕಷ್ಟೇ ಅಲ್ಲ, ಪ್ರಚಾರ ಮಾಡುವುದಕ್ಕೂ ಅವಕಾಶ ನೀಡಿದೆ" ಎಂದು 'ಗ್ಲೋಬಲ್ ಕೌನ್ಸಿಲ್ ಆಫ್ ಇಂಡಿಯನ್ ಕ್ರಿಶ್ಚಿಯನ್ಸ್"ನ ಅಧ್ಯಕ್ಷ ಸಜನ್ ಕೆ. ಜಾರ್ಜ್ ಹೇಳಿದ್ದಾರೆ. ಒಂದು ವೇಳೆ, ಸಂವಿಧಾನದ 25ನೇ ವಿಧಿ ನೀಡಿರುವ ಹಕ್ಕನ್ನು ಉಪಯೋಗಿಸಿಕೊಂಡು ಮಿಷನರಿಗಳು ಮತಾಂತರ ಮಾಡಬಹುದಾದರೆ, ಮತಾಂತರಗೊಂಡವರಿಗೆ ಬುದ್ಧಿ ಹೇಳಿ, ಮನವೊಲಿಸಿ ಮಾತೃಧರ್ಮಕ್ಕೆ ಕರೆತರುವ ಹಕ್ಕು ಹಿಂದೂಗಳಿಗೂ ಇದೆಯಲ್ಲವೆ? ಮೊದಲು ಕ್ಯಾತೆ ತೆಗೆದ ಮಿಷನರಿಗಳು, ಪ್ರತಿದಾಳಿ ನಡೆದ ಕೂಡಲೇ ತಾವು 'victims" ಎಂಬಂತೆ ಪೋಸು ಕೊಡುತ್ತಿದ್ದಾರೆ! ಭಾರತದಲ್ಲಿ ಕೈಸ್ತರ ಮೇಲೆ ಭಾರೀ ದೌರ್ಜನ್ಯ ನಡೆಯುತ್ತಿದೆ ಎಂಬ ಪ್ರಚಾರಾಂದೋಲನ ಆರಂಭವಾಗಿದೆ. ಅಣಕವೆಂದರೆ, ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಕರಿಯರು ಇರುವ ಕಡೆ ಭಾರತಕ್ಕಿಂತಲೂ ಹೆಚ್ಚು ಚರ್ಚ್‌ಗಳ ಮೇಲೆ ದಾಳಿ ನಡೆದಿದೆ. ಅಷ್ಟೇ ಅಲ್ಲ, ಪ್ರತಿವರ್ಷವೂ ಭಾರತದಲ್ಲಿ ಪಾದ್ರಿಗಳ ಮೇಲೆ ನಡೆಯುವ ದಾಳಿಗಳ ಸಂಖ್ಯೆಗಳಿಗಿಂತ ಅಮೆರಿಕದಲ್ಲಿ ಮಕ್ಕಳನ್ನು ಲೈಂಗಿಕ ಕಾರ್ಯಕ್ಕೆ ಬಳಸಿಕೊಂಡ ಆರೋಪದ ಮೇಲೆ ಬಂಧಿತರಾಗುವ ಪಾದ್ರಿಗಳ ಸಂಖ್ಯೆಯೇ ಹೆಚ್ಚು!

ಇದೇನೇ ಇರಲಿ, ಮತಾಂತರ ತಪ್ಪು ಅಂತ ಹೇಳುತ್ತಿಲ್ಲ. ಒಂದು ವೇಳೆ, ಯಾರಾದರೂ ಬೈಬಲ್ ಓದಿ, ಕ್ರಿಸ್ತನ 'ಪವಾಡ"ಗಳಿಗೆ ಮಾರುಹೋಗಿ, ಭಕ್ತಿ ಉಕ್ಕಿಬಂದು ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡರೆ ಯಾರು ಬೇಡವೆನ್ನುವುದಿಲ್ಲ. ಅಷ್ಟಕ್ಕೂ, 'ಮತಾಂತರಗೊಳ್ಳುವುದು" ತಪ್ಪಲ್ಲ, ಆದರೆ ಕಥೆ ಹೇಳಿ, ಮಂಕುಬೂದಿ ಎರಚಿ, ಆಮಿಷವೊಡ್ಡಿ ಮತಾಂತರ “ಮಾಡುವುದು" ಖಂಡಿತ ತಪ್ಪಾಗುತ್ತದೆ. ಅಲ್ಲದೆ ಮತ ಪ್ರಚಾರವೆಂಬುದು ಧರ್ಮದೊಳಗೆ ನಡೆಯಬೇಕೇ ಹೊರತು ಬೀದಿಯಲ್ಲಿ ಹೋಗುತ್ತಿರುವವರಿಗೆ, ಬಸ್‌ನಲ್ಲಿ ಜತೆ ಕುಳಿತಿರುವವರಿಗೆಲ್ಲ ಪುಕ್ಕಟೆ ಬೈಬಲ್ ಕೊಟ್ಟು, ಓದಿ ಅಂತ ಒತ್ತಾಯಿಸುವುದಲ್ಲ. ಕ್ರಿಶ್ಚಿಯಾನಿಟಿಯೇ ಗ್ರೇಟ್ ಎಂದು ಸಾಬೀತುಪಡಿಸುವ ಸಲುವಾಗಿ ಹಿಂದೂ ದೇವ-ದೇವತೆಗಳನ್ನು ಅವಹೇಳನ ಮಾಡಲು ಬಂದರೆ ಯಾರಿಗೆ ತಾನೆ ಸಿಟ್ಟು ಬರುವುದಿಲ್ಲ?

ಪ್ರತಿಫಲದ ನಿರೀಕ್ಷೆಯಿಲ್ಲದ ಮಾಡುವ ಸೇವೆ ನಿಜವಾದ ಸೇವೆ ಎನಿಸಿಕೊಳ್ಳುತ್ತದೆ. ಆದರೆ ಸೇವೆ ಮಾಡುವ ನೆಪದಲ್ಲಿ ಮತಾಂತರಕ್ಕೆ ಮುಂದಾದರೆ ಸಮಸ್ಯೆ ಆರಂಭವಾಗುತ್ತದೆ. ಅಷ್ಟಕ್ಕೂ, ಬಡವರು, ಸಮಸ್ಯೆಗಳು, ದೌರ್ಜನ್ಯ ಇರುವುದು ಭಾರತದಲ್ಲಿ ಮಾತ್ರವೇ? ವಿಶ್ವದ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ನೆರೆಯ ಬಾಂಗ್ಲಾದೇಶ, ಪಾಕಿಸ್ತಾನ, ಚೀನಾದಲ್ಲಿ ಬಡವರಿಲ್ಲವೆ? ಏಕೆ ಮುಸ್ಲಿಮರ ಗಲ್ಲಿಗೆ ಹೋಗಿ ಪುಕ್ಕಟೆಯಾಗಿ ಬೈಬಲ್ ಹಂಚುವುದಿಲ್ಲ? ಇವರಿಗೆ ಬಡ ಹಾಗೂ ದಲಿತ ಹಿಂದೂಗಳೇ ಏಕೆ ಬೇಕು? ನಮ್ಮ-ನಿಮ್ಮಂಥ ವಿದ್ಯಾವಂತರನ್ನೇಕೆ ಮತಾಂತರ ಮಾಡಲು ಬರುವುದಿಲ್ಲ? ಒಂದು ವೇಳೆ, ಕ್ರಿಶ್ಚಿಯಾನಿಟಿಯಲ್ಲಿ ದೌರ್ಜನ್ಯಗಳೇ ಇಲ್ಲದೆ ಹೋಗಿದ್ದರೆ ಅಮೆರಿಕದ ಖ್ಯಾತ ಬಾಕ್ಸರ್‌ಗಳಾದ ಮೈಕ್ ಟೈಸನ್, ಮೊಹಮದ್ ಅಲಿ, ಬರ್ನಾರ್ಡ್ ಹಾಪ್‌ಕಿನ್ಸ್ ಹಾಗೂ ಬ್ರಿಟಿಷ್ ಬಾಕ್ಸರ್ ಕ್ರಿಸ್ ಎಬಂಕ್ ಅವರಂತಹ ಖ್ಯಾತನಾಮರು ಇಸ್ಲಾಮಿಗೆ ಮತಾಂತರಗೊಂಡಿದ್ದೇಕೆ?

ಗುಲಾಮಗಿರಿ ಆರಂಭವಾಗಿದ್ದು ಯಾವ ಧರ್ಮೀಯರಿಂದ? ಕ್ರೈಸ್ತರೇ ಆಗಿರುವ ಆಫ್ರಿಕನ್ ಅಮೆರಿಕನ್ನರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ? ಅದಿರಲಿ, ಕ್ರಿಸ್ತನಲ್ಲಿ ನಂಬಿಕೆ ಇಟ್ಟರೆ ಮಾತ್ರ ನಿಮ್ಮ ಪಾಪ ಪರಿಹಾರವಾಗುತ್ತದೆ ಎಂದು ಬಡ ಹಿಂದೂಗಳನ್ನು ದಾರಿ ತಪ್ಪಿಸುತ್ತಿರುವುದೇಕೆ? ಮಾರಮ್ಮ, ಚೌಡಮ್ಮ, ಅಣ್ಣಮ್ಮನ ಬದಲು ಮೇರಿಯಮ್ಮ ಮತ್ತು ಜೀಸಸ್‌ನನ್ನು ಆರಾಧಿಸಿದರೆ ಮಾತ್ರ ಪಾಪದಿಂದ ವಿಮುಕ್ತಿ ಸಿಗುತ್ತದೆ ಅನ್ನಲು ದೇವರೇನು ಡಿಟರ್ಜೆಂಟಾ? ಧರ್ಮವೇನು ಪಾಪದ ಕೊಳೆ ತೊಳೆಯುವ ಸೋಪಾ? ಅಷ್ಟಕ್ಕೂ, ಪಾಪ ವಿಮುಕ್ತಿ ಮಾಡಿಕೊಳ್ಳಬೇಕೆಂದಾದರೆ ಎಲ್ಲರೂ ಪಾಪದೊಂದಿಗೇ ಹುಟ್ಟಿರುತ್ತಾರೆಯೆ? ಕ್ರೈಸ್ತರಿಗೆ ಮರುಜನ್ಮದಲ್ಲಿ ನಂಬಿಕೆಯೇ ಇಲ್ಲ ಎಂದಾದ ಮೇಲೆ ಪಾಪ ಮಾಡಿದ್ದಾದರೂ ಯಾವಾಗ? ಇನ್ನು ಕ್ರಿಸ್ತನಲ್ಲಿ ನಂಬಿಕೆ ಇಟ್ಟವರ ಪಾಪ ಮಾತ್ರ ಪರಿಹಾರವಾಗುತ್ತದೆ ಅನ್ನುವುದಾದರೆ ದೇವರೂ ಕೂಡ ತಾರತಮ್ಯ ಮಾಡುತ್ತಾನೆಯೇ?!

ಅದಿರಲಿ, ಇತ್ತೀಚೆಗೆ ಚರ್ಚ್‌ಗಳೇಕೆ 'ದೇವಾಲಯ"ಗಳಾಗುತ್ತಿವೆ?ಸಾಮಾನ್ಯವಾಗಿ ಹಿಂದೂಗಳ ಪ್ರಾರ್ಥನಾ ಕೇಂದ್ರಗಳನ್ನು ಮಂದಿರ, ಗುಡಿ, ದೇವಾಲಯ ಎನ್ನುತ್ತಾರೆ. ಹಾಗೆಯೇ ಮುಸ್ಲಿಮರದ್ದು ಮಸೀದಿ, ಜೈನರದ್ದು ಬಸದಿ, ಬೌದ್ಧರದ್ದು ಚೈತ್ಯಾಲಯ, ಕ್ರಿಶ್ಚಿಯನ್ನರದ್ದು ಚರ್ಚ್. ಆದರೆ ಇತ್ತೀಚೆಗೆ ಕ್ಯಾಥೋಲಿಕ್ ಚರ್ಚ್‌ಗಳೂ 'ದೇವಾಲಯ"ಗಳೆಂಬ ಬೋರ್ಡು ಹಾಕಿಕೊಳ್ಳಲಾರಂಭಿಸಿವೆ! ಕರ್ನಾಟಕದ ಯಾವ ಮೂಲೆಗೆ ಬೇಕಾದರೂ ಹೋಗಿ ನೋಡಿ, ಚರ್ಚ್‌ಗಳ ಮೇಲೆ 'ಬಾಲ ಯೇಸುವಿನ ದೇವಾಲಯ", 'ಪ್ರಾರ್ಥನಾ ಮಂದಿರ", 'ಸೇವಾ ಸದನ", 'ವೇದ ಸದನ", 'ಕ್ರೈಸ್ತ ಪ್ರೇಮಾಲಯ", 'ಪೂರ್ಣೋದಯ" ಎಂಬ ಹೆಸರುಗಳು ಕಾಣುತ್ತವೆ. ಇವುಗಳಾವುವೂ ಹಿಂದೂ ಧರ್ಮ ಸಂಸ್ಥೆಗಳಲ್ಲ. ಚರ್ಚ್‌ಗಳನ್ನು 'ಭಾರತೀಕರಣ'(Indianisation)ಗೊಳಿಸಿ, ಕ್ರಿಸ್ತ-ಕೃಷ್ಣ ಒಂದೇ ಎಂದು ಕಥೆ ಹೇಳಿ ಬಡ ಹಿಂದೂಗಳನ್ನು ದಾರಿತಪ್ಪಿಸುವ ಕಾರ್ಯ ಶುರುವಾಗಿದೆ.

ಅಷ್ಟೇ ಅಲ್ಲ, ಚರ್ಚ್‌ಗಳಲ್ಲಿ ಮಂಗಳಾರತಿ ಆರಂಭವಾಗಿದೆ, ಪ್ರಸಾದ-ತೀರ್ಥ ಕೊಡುತ್ತಾರೆ, ಕೈಗೆ ಕಟ್ಟಿಕೊಳ್ಳಲು ಕೆಂಪು ದಾರ ಕೊಡುತ್ತಾರೆ, ಅಲ್ಲಲ್ಲಿ ಮೇರಿಯಮ್ಮನ ಜಾತ್ರೆ ಕೂಡ ಆರಂಭವಾಗಿದೆ! ಆದರೆ ಹಿಂದೂಗಳ ಪೂಜಾಕರ್ಮಗಳಾದ ಪ್ರಸಾದ, ತೀರ್ಥಗಳನ್ನು ಕೊಡುವಂತೆ ಯಾವ ಬೈಬಲ್‌ನಲ್ಲಿ ಹೇಳಲಾಗಿದೆ? ಹಿಂದೂಗಳಾದ ನಾವು ದೇವಾಲಯಗಳ ಒಳಗೆ ಪ್ರವೇಶಿಸುವ ಮೊದಲು ಚಪ್ಪಲಿಯನ್ನು ಕಳಚುತ್ತೇವೆ, ನೆಲದ ಮೇಲೆ ಕುಳಿತು ಭಜನೆ ಮಾಡುತ್ತೇವೆ. ಈಗ ಕೆಲವು ಚರ್ಚ್‌ಗಳ ಮುಂದೆ ಕೂಡ 'ಚಪ್ಪಲಿಯನ್ನು ಕಳಚಿ ಒಳಪ್ರವೇಶಿಸಿ" ಎಂಬ ಬೋರ್ಡ್‌ಗಳನ್ನು ಕಾಣಬಹುದು. ಸಾಮಾನ್ಯವಾಗಿ ಚರ್ಚ್‌ಗಳಲ್ಲಿ ಬೆಂಚ್ ಮುಂದೆ ಮಂಡಿಯೂರಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಆದರೆ ದಲಿತ ಹಾಗೂ ಹಿಂದುಳಿದ ಹಿಂದೂಗಳನ್ನು ಮತಾಂತರ ಮಾಡಿರುವ ಕಡೆಗಳಲ್ಲೆಲ್ಲ ಬೆಂಚ್ ಬದಲು ನೆಲದ ಮೇಲೆ ಸಾಮೂಹಿಕವಾಗಿ ಕುಳ್ಳಿರಿಸಿ ಭಜನೆ ಮಾಡಿಸುವ ಪದ್ಧತಿ ಆರಂಭಿಸಲಾಗಿದೆ! ಇನ್ನೂ ಗಮನಾರ್ಹ ಅಂಶವೆಂದರೆ ಮಧ್ಯಪ್ರದೇಶದಲ್ಲಿ ನವ ಪಾದ್ರಿಗಳನ್ನು (seminary) ರೂಪಿಸುವ ಧಾರ್ಮಿಕ ಶಾಲೆಗಳಿಗೆ 'ಸಚ್ಚಿದಾನಂದ ಗುರುಕುಲ" ಎಂಬ ಹೆಸರಿಟ್ಟಿದ್ದಾರೆ. 'ಸತ್-ಚಿತ್-ಆನಂದ್' ಎಂಬ ಭಾರತೀಯ ತತ್ತ್ವ, ಕಲ್ಪನೆಯನ್ನು ಕ್ರೈಸ್ತರ "trinity"(the father, the son and the holy spirit)ಗೆ ಹೋಲಿಸಲಾಗುತ್ತಿದೆ! ಎಂತಹ ಮೋಸ ಅಲ್ವಾ?!

ಪೂಜೆ-ಪುನಸ್ಕಾರ, ಪ್ರಸಾದ-ತೀರ್ಥ ಮುಂತಾದ ಪೂಜಾ ಕ್ರಿಯೆಗಳಿಗೆ ಒಗ್ಗಿಹೋಗಿರುವ ಹಿಂದೂಗಳು ಮತಾಂತರಗೊಂಡ ನಂತರ ಭ್ರಮನಿರಸನಗೊಂಡು ಮರಳಿ ಮಾತೃಧರ್ಮಕ್ಕೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಚರ್ಚ್‌ಗಳು ಇಂತಹ ಧೂರ್ತ ಹಾಗೂ ದಾರಿತಪ್ಪಿಸುವ ಕಾರ್ಯಕ್ಕೆ ಕೈಹಾಕಿವೆ. ಅವರು ತಮ್ಮ 'head count" ಜಾಸ್ತಿ ಮಾಡಿಕೊಳ್ಳುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲರು. ಒಂದು ವೇಳೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಭಾರತ ಮತ್ತೊಂದು ದಕ್ಷಿಣ ಕೊರಿಯಾ ಆದೀತು! 1950ರಿಂದ 1953ರವರೆಗೂ ನಡೆದ ಕೊರಿಯಾ ಯುದ್ಧದ ನಂತರ ದಕ್ಷಿಣ ಹಾಗೂ ಉತ್ತರ ಕೊರಿಯಾಗಳೆಂಬ ಎರಡು ಪ್ರತ್ಯೇಕ ರಾಷ್ಟ್ರಗಳು ರಚನೆಯಾದವು. ಅಮೆರಿಕದ ಜತೆ ಗುರುತಿಸಿಕೊಂಡ ದಕ್ಷಿಣ ಕೊರಿಯಾಕ್ಕೆ ಅಮೆರಿಕದ ಧನ ಸಹಾಯ ಹರಿದು ಬರುವ ಜತೆಗೆ ಮಿಷನರಿಗಳೂ ಆಗಮಿಸಿದರು.

ಆದರೆ ಋಣಭಾರಕ್ಕೆ ಬಿದ್ದಿದ್ದ ದಕ್ಷಿಣ ಕೊರಿಯಾ ವಿರೋಧಿಸುವ ಸ್ಥಿತಿಯಲ್ಲೂ ಇರಲಿಲ್ಲ. ಹೀಗೆ ಬಂದ ಮಿಷನರಿಗಳು ಕ್ರಿಶ್ಚಿಯಾನಿಟಿ ಎಂದರೆ ಪ್ರಗತಿ (progress), ಬುದ್ಧಿಸಂ ಎಂದರೆ ಹಿಂದುಳಿಯುವಿಕೆ (regression)ಎಂಬ ಭಾವನೆ ಸೃಷ್ಟಿಸಿದರು. ಪರಿಣಾಮವಾಗಿ ಇಂದು ದಕ್ಷಿಣ ಕೊರಿಯಾದಲ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ಕ್ರೈಸ್ತರಿದ್ದಾರೆ. ಅಷ್ಟೇ ಅಲ್ಲ, ಇನ್ನು ಕೆಲವೇ ವರ್ಷಗಳಲ್ಲಿ ಅದು ಕ್ರಿಶ್ಚಿಯನ್ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇದನ್ನು “Korean Miracle" ಅಂತ ಕರೆಯುತ್ತಿದ್ದಾರೆ! ದಕ್ಷಿಣ ಕೊರಿಯಾವನ್ನು “Bastion of christianity" ಅಂತ ವ್ಯಾಟಿಕನ್ ಹೊಗಳುತ್ತಿದೆ. ಆದರೆ ಇದೇ ಕ್ರೈಸ್ತ ಮಿಷನರಿಗಳು 1940ರ ದಶಕದಲ್ಲಿ ಚೀನಾಕ್ಕೆ ಹೋಗಿ ಮತಾಂತರ ಕಾರ್ಯ ಆರಂಭಿಸಿದಾಗ ಅದನ್ನು “denationalistion process" ಎಂದು ಕರೆದ ಚೀನೀ ನಾಯಕರು, “one more christian, one less chineese" ಅಂತ ಜನರನ್ನು ಎಚ್ಚರಿಸಿದರು.

ಈ ಘಟನೆಗೂ ಸಾಕಷ್ಟು ವರ್ಷಗಳ ಮೊದಲೇ, “ಹಿಂದೂವೊಬ್ಬ ಪರಧರ್ಮಕ್ಕೆ ಮತಾಂತರಗೊಂಡನೆಂದರೆ ಹಿಂದೂಗಳ ಸಂಖ್ಯೆ ಒಂದು ಕಡಿಮೆಯಾಗುವುದು ಮಾತ್ರವಲ್ಲ, ಒಬ್ಬ ಶತ್ರುವೂ ಸೃಷ್ಟಿಯಾದಂತೆ" ಎಂದಿದ್ದ ಸ್ವಾಮಿ ವಿವೇಕಾನಂದರ ಎಚ್ಚರಿಕೆಯ ಮಾತುಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಮುಂದೆ ಎದುರಾಗಲಿರುವ ಅಪಾಯದ ಅರಿವಾಗುತ್ತದೆ. ಅಷ್ಟಕ್ಕೂ, ಹಿಂದೂವೊಬ್ಬ ಮತಾಂತರಗೊಂಡರೆ, ಹಿಂದೂಗಳ ಸಂಖ್ಯೆ ಒಂದು ಕಡಿಮೆಯಾಗುವುದು ಮಾತ್ರ ವಲ್ಲ, ಒಬ್ಬ ಭಾರತೀಯನೂ ಕಡಿಮೆಯಾದಂತೆ!

(ಸ್ನೇಹ ಸೇತು : ವಿಜಯಕರ್ನಾಟಕ)
User Comments
[ ಅಭಿಪ್ರಾಯ ಬರೆಯಿರಿ ]
ಇಂದ: nagaraja rao
ದಿನಾಂಕ: 13 Jan 2008 11:59 pm
ಇತ್ತೀಚೆಗೆ ಇಲ್ಲಿ ಒಬ್ಬ ಹಿ೦ದೂ ಹುಡುಗಿಯನ್ನು ಕ್ರಿಸ್ತಿಯನರ ಹುಡುಗ ಮದುವೆ ಆದ. ಇಬ್ಬರ ತ೦ದೆ ತಾಯಿಯರೂ ಭಾರತದಿ೦ದ ಬ೦ದವರು.ಮಕ್ಕಳು ಮಾತ್ರ ಇಲ್ಲಿ ಹುಟ್ಟಿದವರು. ಹುಡುಗನ ತ೦ದೆಯ ವ೦ಶಸ್ತರು ಮೊದಲಿಗೆ ಮ೦ಗಳೂರು ಸಾರಸ್ವತ ಬ್ರಾಹ್ಮಣರು. ಪ್ರಭು ಅವರ ಮನೆತನದ ಹೆಸರು. ಇವರು ಕ್ರಿಸ್ತಿಯನರ ಹೇಗೆ ಆದರು ಎ೦ದು ಅವರ ಬಾಯಿಯಲ್ಲೇ ಕೇಳಿದೆ. ಇವರ ಮುತ್ತಾತನ ತಾತ ಒಬ್ಬ ಕಟ್ಟಾ ನಿಸ್ತಾವ್೦ತ ಬ್ರಾಹ್ಮಣ.ತ್ರಿಕಾಲ ಸ೦ಧ್ಯಾವ೦ದನೆ ಮಾಡುತ್ತಿದ್ದರ೦ತೆ. ಕದಿರೆಯ ಮ೦ಜುನಾಥಸ್ವಾಮಿಯ ಅನನ್ಯ ಭಕ್ತರು.ಒ೦ದು ದಿನ ದೇವಸ್ತಾನಕ್ಕೆ ಹೊಗುತ್ತಿದ್ದರೆ, ಟೀಪೂ ಸುಲ್ತಾನನ ಸೈನೀಕರು ಬೆನ್ನತ್ತಿ ಬ೦ದರ೦ತೆ.ಆಗ ತಾನೆ ಮೈಸೂರಿನ ಸುಲ್ತಾನ ಭಾಘಮ೦ಡಲ,ಕೊಡಗು, ದಖ್ಶಿಣ ಕರಾವಳಿ ವೈನಾಡ್ ಮೂಲಕ ಕೇರಳ ಕಡಲು ತೀರಗಳ ಮುತ್ತಿಗೆ ಹಾಕಲು ಸೈನೀಕರನ್ನು ಕಳುಹಿಸಿದ್ದನ೦ತೆ. ದಾರಿ ಉದ್ದಕ್ಕು ದೇವಸ್ತಾನಗಳನ್ನು ಹಾಳು ಮಾಡಿ ಅದರ ಪಾಯದಮೇಲೇ ಮಸೀದಿಗಳನ್ನು ಕಟ್ಟಬೇಕೆ೦ದೂ,ಎಕಾ೦ಕಿ ಹಿ೦ದೂ ಹೆ೦ಗಸರನ್ನು ಶೀಲಗೆಡಿಸಿ,ಹಿ೦ದೂ ಗ೦ಡಸರನ್ನು ಬಲವ೦ತವಾಗಿ ಮತಾ೦ತರ ಮಾಡಬೇಕೆ೦ದು ಆಗ್ನಪಿಸಿದ್ದನ್೦ತೆ.ಪ್ರಭು ಅವರ ವ೦ಶಸ್ತರನ್ನು ಅಟ್ಟಿಸಿ ಕೊ೦ಡು ಬ೦ದಾಗ, ಭ ಯದಿ೦ದ ಬಾಗಿಲು ಮುಚ್ಚಿ ಮು೦ದಕ್ಕೆ ಓಡಿಸಿದರ೦ತೆ. ಆಗ ಅಲ್ಲೆ ಇದ್ದ ಕ್ರಿಸ್ತಿಯನ್ ಚರ್ಚ್ ಗೆ ಹೋಗಿ ಅವಿಥಿಟ್ಟು ಕೊ೦ಡರ೦ನ್ತೆ.ಅಲ್ಲಿನ ಪಾದ್ರಿ ಸೈನೀಕರು ಒಳಗೆ ಬರದ ಹಾಗೆ ಮಾದಿ ಇವರ ಜೀವ ಉಳಿಸಿದನ೦ತೆ. ಉಳಿಸಿದ್ದಕ್ಕೆ ನೀನು ಕ್ರಿಸ್ತಿಯನ್ ಆಗು ಎ೦ದು ಬಲಾತ್ಕಾರ ಮಾಡಿದನ೦ತೆ.ಅವನಿ೦ದ ತಪ್ಪಿಸಿಕೊ೦ಡು ಮನೆಗೆ ಹೋದರೆ ನೀನು ಜಾತಿ ಕೆಟ್ಟವ ಎ೦ದು ಮನೆಗೆ ಸೇರಿಸದೆ ಓಡಿಸಿದರ೦ತೆ. ಬೇರೆ ದಾರಿಯಿಲ್ಲದೆ,ಮುಸಲ್ಮಾನ ನಾಗಲು ಇಚ್ಚಿಸದೆ ಕ್ರಿಸ್ತಿಯನ್ ಧರ್ಮವನ್ನು ಅವಲ೦ಬಿಸಿದನ೦ತೆ.ಇದು ನಮ್ಮ ಹಿ೦ದು ಗಳ ಕರ್ಮ ಕಾ೦ಡ.

ಇಂದ: ramu
ದಿನಾಂಕ: 13 Jan 2008 11:20 pm
I do agree and support your attitude... kannada belayabeku.. dharmagala sathyasathyate galannu oregacchhi noduva shaktanall..mathandanu alla.. dayavittu navellaru kannadada olithige prayathnisona.. nimage shubhavagali

[ ಅಭಿಪ್ರಾಯ ಬರೆಯಿರಿ ]
Today's Deal
ಓದಲು ಮರೆತಿದ್ದರೆ?
ಇತ್ತೀಚಿನ ಲೇಖನ
thatsKannada Archives
Aindrita Ray in AKKA Sammelana ಅಕ್ಕದಲ್ಲಿ ಹಳೆಪಾತ್ರೆ
SriMurali in AKKA Sammelana ಅಕ್ಕ ಅಪ್ಪುಗೆ
Ms AKKA Pageant 2010 'ಅಕ್ಕ' ಸುಂದರಿ

Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India